ಹುಬ್ಬಳ್ಳಿ: ಕೊರೊನಾ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿದ್ದು ಆತಂಕದಲ್ಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯರಿಗೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ರೇಣುಕಾ ಶಿಕ್ಷಣ ಹಾಗೂ ಕಲ್ಯಾಣ ಕೇಂದ್ರ ಮತ್ತು ಸೋಷಿಯಲ್ ಸೋಲ್ಜರ್ಸ್ ಆಫ್ ಇಂಡಿಯಾ ವತಿಯಿಂದ ರೋಗನಿರೋಧಕ ಶಕ್ತಿ ವೃದ್ಧಿಸಲು ಮಾತ್ರೆಗಳು ,ಸ್ಯಾನಿಟೈಜರ್ ಹಾಗು ಮಾಸ್ಕ್ ವಿತರಿಸಲಾಗಿದೆ.
ತಮ್ಮ ಜೀವನವನ್ನು ಪಣಕ್ಕಿಟ್ಟು ಪೊಲೀಸರು ಹಾಗೂ ವೈದ್ಯರು ಕೊರೊನಾ ತಡೆಗಟ್ಟಲು ಹರಸಾಹಸ ಪಡುತ್ತಿದ್ದು ಅವರಿಗೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ, ರೋಗ ನಿರೋಧಕ ಮಾತ್ರೆಗಳು, ಎಲೆಕ್ಟ್ರೊಕಿಂಡ್ ಓಆರ್ಎಸ್ ಪೌಡರ್, ಸ್ಯಾನಿಟೈಜರ್, ಮಾಸ್ಕ್ ವಿತರಣೆ ಮಾಡಿ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಈ ಬಗ್ಗೆ ಮಾತನಾಡಿದ ಸೋಷಿಯಲ್ ಸೋಲ್ಜರ್ಸ್ ಆಫ್ ಇಂಡಿಯಾದ ಅಧ್ಯಕ್ಷ ವಿಷ್ಣು ಭಗವಾನ್, ಜನರು ಜಾಗರೂಕರಾಗಿರಿ. ಅನಾವಶ್ಯಕವಾಗಿ ತಿರುಗಾಡದೆ ಮಾರ್ಗಸೂಚಿಗಳನ್ನು ಪಾಲಿಸಿ. ಪೊಲೀಸರು ಮತ್ತು ವೈದ್ಯರಿಗೆ ಇಮ್ಯುನಿಟಿ ಅಭಿವೃದ್ಧಿ ಮಾಡುವ ಔಷಧಿಗಳನ್ನು ನೀಡಿದ್ದೇವೆ. ಕೊರೊನಾ ಸಂದರ್ಭದಲ್ಲಿ ಬೇಕಾದ ಅಗತ್ಯ ವಸ್ತುಗಳನ್ನೂ ಸಹ ಕಲ್ಪಿಸಿದ್ದೇವೆ ಎಂದರು.
ಕೊರೊನಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೇ ಇದ್ದ ಸಾರ್ವಜನಿಕರಿಗೆ ಸಹ ಕೊರೊನಾ ಕಿಟ್ ವಿತರಣೆ ಮಾಡಿ ಎಲ್ಲರೂ ಸಹ ಮಾಸ್ಕ್ ಬಳಸಿ ಎಂದು ಮನವಿ ಮಾಡಿದರು.