ಹುಬ್ಬಳ್ಳಿ: ಇತ್ತಿಚೆಗೆ ಹುಬ್ಬಳ್ಳಿಯ ಡೆನಿಸನ್ ಹೋಟೆಲ್ನಲ್ಲಿ ನಡೆದ ಬಿಜೆಪಿ ಸದಸ್ಯರ ಕೋರ್ ಕಮೀಟಿ ಸಭೆಯಲ್ಲಿನ ಆಡಿಯೋ ವೈರಲ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಆಪ್ತ ವಲಯದಲ್ಲಿಯೇ ಅನುಮಾನದ ಹುತ್ತ ಬೆಳೆಯ ತೊಡಗಿದೆ.
ಸಿಎಂ ಬಿಎಸ್‌ವೈ ಆಡಿಯೋ ಪ್ರಕರಣದ ತನಿಖೆ ಕೈಗೊಳ್ಳಲಾಗಿದ್ದು, ಹೊಸ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಸಭೆ ನಡೆದ ಹೋಟೆಲ್‌ನ ಎಲ್ಲ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಸಭೆ ನಡೆದ ಹಾಲ್ನಲ್ಲಿ ಮಾತ್ರ ಸಿಸಿ ಕ್ಯಾಮರಾಗಳು ಆಫ್ ಆಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಭೆ ನಡೆದ ಹಾಲಿನಲ್ಲಿದ್ದ ಸಿಸಿ ಕ್ಯಾಮರಾ ಆಫ್ ಮಾಡಿಸಲಾಗಿತ್ತಾ?
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ಮೆರೆಗೆ ಸಿಸಿಟಿವಿ ಆಫ್ ಮಾಡಲಾಗಿತ್ತಾ? ಎಂಬ ಅನುಮಾನ ಈಗ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೇ ಸಭೆಯಲ್ಲಿ ಯಾರು ಯಾರು ಇರಬೇಕು ಎನ್ನುವುದು ಮೊದಲೇ ನಿರ್ಧಾರವಾಗಿತ್ತು. ಈ ಬಗ್ಗೆ ಲಿಸ್ಟ್ ಕೂಡ ತಯಾರಿಸಲಾಗಿದ್ದು, ಲಿಸ್ಟ್ನಲ್ಲಿ ಇದ್ದವರನ್ನು ಮಾತ್ರ ಹಾಲ್ ಒಳಗೆ ಬಿಡಲಾಗಿತ್ತು. ಸಭೆಯ ಮಾಹಿತಿ ಸೋರಿಕೆಯಾಗಬಾರದು ಎಂಬ ರಾಜ್ಯಾಧ್ಯಕ್ಷರ ಸೂಚನೆ ಮೆರೆಗೆ ಸಿಸಿಟಿವಿ ಆಫ್ ಮಾಡಿಸಲಾಗಿತ್ತು ಎನ್ನಲಾಗುತ್ತಿದೆ.
ಆದರೆ, ಸಭೆಯ ಕೊನೆ ಸಾಲಿನಲ್ಲಿದ್ದವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿದ್ದು, ಯಾರು ಅಂತ ಕೆಲವರಿಗೆ ಗೊತ್ತಿದೆ. ಆದರೆ ಅವರು ಯಾರಿಗೂ ಬಾಯಿ ಬಿಡುತ್ತಿಲ್ಲ ಎಂಬ ಸುದ್ದಿಯೂ ಹರಿದಾಡುತ್ತಿದೆ. ಒಂದು ವೇಳೆ ಇಂತವರೇ ಎಂದು ಗೊತ್ತಾದರೆ ಎಲ್ಲರ ಬಣ್ಣ ಬಯಲಾಗಲಿದೆ ಎಂಬ ಅಂಜಿಕೆಯೂ ಪಕ್ಷದ ಮುಖಂಡರಲ್ಲಿ ಕಾಡುತ್ತಿದೆ.
ಒಟ್ಟಿನಲ್ಲಿ ಇದ್ದವರು ಮೂವರಲ್ಲಿ ಕದ್ದವರು ಯಾರು ಎಂಬುವಂತ ಪ್ರಶ್ನೆ ಬಿಜೆಪಿಯಲ್ಲಿ ಕಾಡುತ್ತಿದೆ. ಇದರ ಮಧ್ಯೆ ಹೋಟೆಲ್ ಸಿಸಿಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ಮ್ಯಾನೇಜರ್ ಅವರನ್ನು ಕರೆದು ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.