ಹುಬ್ಬಳ್ಳಿ: ಗಾಣಿಗರು ಶ್ರಮ ಜೀವಿಗಳು. ಕೇವಲ ಗಾಣಿಗ ವೃತ್ತಿಯಲ್ಲಿ ಅಷ್ಟೇ ಅಲ್ಲ, ಇತರ ವೃತ್ತಿಗಳಲ್ಲಿ ನೈಪುಣ್ಯ ಹೊಂದಿದರೆ ಮಾತ್ರ ಗಾಣಿಗ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಗೋಕುಲ ರಸ್ತೆಯ ಚೌಹಾಣ್ ಗ್ರೀನ್ ಗಾರ್ಡನ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ ಗಾಣಿಗ ಸಂಘದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ಸಮಾಜ ಅಭಿವೃದ್ಧಿ ಯಾಗಬೇಕಾದರೆ ಅದು ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕು. ಹಾಗಾದರೆ ಮಾತ್ರ ಸಾಮಾಜಿಕವಾಗಿ ಬೆಳೆಯಲು ಸಾಧ್ಯ. ಆ ದಿಸೆಯಲ್ಲಿ ಗಾಣಿಗ ಸಮಾಜದ ಜನರು ಮೂಲ ವೃತ್ತಿ ಗಾಣಿಗದಲ್ಲಷ್ಟೇ ನೈಪುಣ್ಯತೆ ಹೊಂದದೆ, ಇತರೆ ವೃತ್ತಿಗಳಲ್ಲೂ ನೈಪುಣ್ಯತೆ ಪಡೆದು ಆರ್ಥಿಕವಾಗಿ ಸದೃಢವಾಗುತ್ತಿದ್ದು, ವೈಯಕ್ತಿಕವಾಗಿ ಸಮಾಜಕ್ಕೆ ಕೊಡುಗೆ ನೀಡುವಂತಹ ಕೆಲಸ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಮಖಂಡಿ ಸಿದ್ದಮಠದ ಸಿದ್ದ ಮುತ್ಯಾ, ಬೆಳಗಾವಿಯ ಶಿವಾನಂದ ಮಹಾಸ್ವಾಮಿಗಳು, ಚಿತ್ರದುರ್ಗದ ಜಯಬಸವ ಮಹಾಸ್ವಾಮಿಗಳು, ಗದಗಿನ ನೀಲಮ್ಮ ಅಸುಂಡಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ಅರವಿಂದ ಬೆಲ್ಲದ ಸೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.