ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತಯಂತ್ರ ಸಂಪೂರ್ಣ ಸ್ಥಗಿತಗೊಂಡಿದ್ದು, ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿಕೊಂಡು 15 ದಿನ ಕಳೆದರೂ ಇನ್ನೂ ಸಚಿವ ಸಂಪುಟ ರಚನೆ ಮಾಡಿಲ್ಲ. ನೆರೆ ಪೀಡಿತ ಪ್ರದೇಶಗಳಿಗೆ ತಾವೊಬ್ಬರೇ ಓಡಾಡುತ್ತಿದ್ದಾರೆ, ಒಬ್ಬರೇ ಎಲ್ಲ ಕಡೆಯೂ ಓಡಾಡಲು ಸಾಧ್ಯವಾಗುತ್ತಾ..? ಒನ್ ಮ್ಯಾನ್ ಶೋ ನಿಲ್ಲಿಸಿ ಜನರ ಕಷ್ಟಕ್ಕೆ ಸ್ಪಂದಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಒತ್ತಾಯಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ನೆರೆ ಪರಿಹಾರ ಕೆಲಸ ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಯಾವೊಂದು ಕೆಲಸಗಳು ಆಗುತ್ತಿಲ್ಲ. ವಿಧಾನಸೌಧ ಬಣಗುಡುತ್ತಿದೆ ಬಿಜೆಪಿಯವರು ಸಚಿವ ಸಂಪುಟ ರಚನೆ ಮಾಡುವುದಕ್ಕೆ ಏಕೆ ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ. ಬಹುಶಃ ಅತೃಪ್ತ ಶಾಸಕರಿಗಾಗಿ ಕಾಯುತ್ತಿದ್ದಾರೋ ಏನೋ ಗೊತ್ತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅನುಯಾಯಿಗಳು ದಂಧೆ ನಡೆಸುತ್ತಿದ್ದಾರೆ. ಕೇಂದ್ರದಿಂದ ಈವರೆಗೂ ಯಾವೊಬ್ಬ ಸಚಿವರೂ ಕರ್ನಾಟಕಕ್ಕೆ ಬಂದಿಲ್ಲ ಎಂದರು.
ಮಾಜಿ ಸಿಎಂ ಸಿದ್ಧರಾಮಯ್ಯ ಈವರೆಗೂ ಬಾದಾಮಿ ತಾಲೂಕಿಗೆ ಹೋಗದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿತ್ತು. ಇಂದು ಕಾರ್ಯಕಾರಿಣಿ ಸಭೆ ಇರುವುದರಿಂದ ದೆಹಲಿಗೆ ತೆರಳಿದ್ದಾರೆ. ನಾಳೆ ಆಗಮಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸಿದ್ಧರಾಮಯ್ಯ ಅವರ ನಡೆ ಸಮರ್ಥಿಸಿದರು.
ಮನಮೋಹನ‌್ ಸಿಂಗ್ ಸರ್ಕಾರವಿದ್ದಾಗ ಇದೇ ತರದ ಪ್ರವಾಹ ಪರಿಸ್ಥಿತಿ ಬಂದಿತ್ತು. ಆಗ ಯುಪಿಎ ಸಾಕಷ್ಟು ಪರಿಹಾರ ಬಿಡುಗಡೆ ಮಾಡಿತ್ತು. ಅದರಂತೆ ಇದೀಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರ ನೆರವಿಗಾಗಿ ಕೆಪಿಸಿಸಿಯಿಂದ ಎರಡು ತಂಡಗಳನ್ನ ರಚಿಸಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ಐದು ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.