ಹುಬ್ಬಳ್ಳಿ : ವಾಯವ್ಯ ಕರ್ನಾಟಕ ಸಾರಿಗೆಯ ನಗರ ಮತ್ತು ಗ್ರಾಮಾಂತರ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇಲ್ಲದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್‌ನಲ್ಲಿ ಸಂಚರಿಸುವಾಗ ಯಾವುದಾದ್ರೂ ಅಪಘಾತ ಹಾಗೂ ಅವಘಡವಾದ್ರೆ ಪ್ರಯಾಣಿಕರಿಗೆ ಪ್ರಾಥಮಿಕ ಚಿಕಿತ್ಸೆ ಅಗತ್ಯ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವವರೆಗೆ ಆತನ ಪ್ರಾಣ ಉಳಿಸುವ ಉದ್ದೇಶದಿಂದ ಈ ಕಿಟ್ ಅವಶ್ಯಕ. ಆದ್ರೆ, ಇಲ್ಲಿ ಮಾತ್ರ ಎಲ್ಲ ತದ್ವಿರುದ್ಧವಾಗಿದೆ.
ಡೆಟಾಲ್, ಡ್ರೆಸಿಂಗ್ ಬಟ್ಟೆ, ಗಾಯದ ಮುಲಾಮು ಇಡುವ ಡಬ್ಬಿಗಳೇ ಮಾಯವಾಗಿವೆ. ಆಕಸ್ಮಿಕವಾಗಿ ಅಪಘಾತ ಸಂಭವಿಸಿದ್ರೆ, ಆ ಪ್ರಯಾಣಿಕ ಪ್ರಥಮ ಚಿಕಿತ್ಸೆಯಿಂದ ವಂಚಿತನಾಗಿ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.
ಓದಿ: ಇನ್ಮುಂದೆ ರೈತನ ಬಳಿ ಇರಲಿದೆ 'ಸ್ವಾಭಿಮಾನಿ ರೈತ' ಗುರುತಿನ ಚೀಟಿ
ಸಾಮಾನ್ಯವಾಗಿ ಎಲ್ಲ ಸಾರಿಗೆ ಬಸ್‌ಗಳಲ್ಲಿಯೂ ಕೂಡ ಇದೇ ಸ್ಥಿತಿ ಇದೆ. ಈ ಬಗ್ಗೆ ಕೆಲ ವಾಹನ ಚಾಲಕರು ಹಾಗೂ ನಿರ್ವಾಹಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರೆ, ಉನ್ನತ ಅಧಿಕಾರಿಗಳು ಕೂಡ ಮಾಧ್ಯಮಕ್ಕೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಮೂಲಗಳ ಪ್ರಕಾರ, ಪ್ರತಿ ವರ್ಷ ಈ ಫಸ್ಟ್ ಏಡ್ ಕಿಟ್ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದ್ರೆ, ಯಾವ ಬಸ್‌ಗಳಲ್ಲಿಯೂ ಒಂದು ಡೆಟಾಲ್ ಕೂಡ ಕಾಣಿಸುವುದಿಲ್ಲ. ಅದು ಎಲ್ಲಿಗೆ ಹೋಗುತ್ತೆ? ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಇದರ ಹಿಂದೆ ಅಕ್ರಮದ ವಾಸನೆ ಬಡಿಯುತ್ತಿದೆ.
ಇದಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕಡಿವಾಣ ಹಾಕಿ ಸಾರ್ವಜನಿಕ ಬಸ್‌ಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕಿಟ್ ಇಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.