ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಆ ನೆರೆ ಸಂತ್ರಸ್ತರಿಗೆ ನಗರದ ವಿವಿಧ ಸಂಘಟನೆಗಳ ಯುವಕರು ನೆರವಿನ ಹಸ್ತ ಚಾಚಿದ್ದಾರೆ.
ಇಂಡಿಯನ್ ಮೀಡಿಯಾ ಕೌನ್ಸಿಲ್ (ಐಎಂಸಿ), ಟೀಮ್ ಸ್ಮೈಲ್, ನಾದ ಝೇಂಕಾರ್ ಎಂಬ ಸಂಘಟನೆಗಳ ಯುವಕರು ಸೇರಿಕೊಂಡು ಸೋಶಿಯಲ್ ಮೀಡಿಯಾಗಳ ಮೂಲಕ ನಿರಾಶ್ರಿತರ ಸಹಾಯಕ್ಕೆ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ.
ನಂತರ ಬೆಳಗಾವಿ, ಚಿಕ್ಕೋಡಿ, ಗದಗ, ನರಗುಂದದ ಶಿರೋಳ, ಮೆಣಸಗಿ, ಚಿಕ್ಕೊಪ್ಪ, ಅವರಾದಿ, ಸಂಗಳ, ಕಪಲಿ, ಕೊಣ್ಣೂರು, ರಾಮದುರ್ಗ ತಾಲೂಕಿನ ಸೂರ್ಯಭಾನ ಸುತ್ತಮುತ್ತಲಿನ ಹಳ್ಳಿಗಳು, ಕುಂದಗೋಳ ತಾಲೂಕಿನ ಚಿಕ್ಕನೆರ್ತಿ, ಹಂಚಿನಾಳ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಕಡೆಗಳಲ್ಲಿನ ಸಂತ್ರಸ್ತರಿಗೆ ತಲುಪಿಸಿದ್ದಾರೆ. ಇವುಗಳನ್ನು ತಲುಪಿಸಲು ಸಾರಿಗೆ ಸಹಾಯವನ್ನು ವಿ-ಟ್ರಾನ್ಸ್ ಟ್ರಾನ್ಸಪೋರ್ಟ್ ನ ಶರಣಪ್ಪ ಮಲ್ಲೂರ, ಎಸ್.ಬಿ. ಮಂಜು ಹಾಗೂ ಟಸ್ಕರ್ ನ ಫಯಾಜ್ ಮಾಡಿದ್ದಾರೆ.
ಈ ಸಂಘಟನೆಗಳ ಯುವಕರಾದ ಕಲ್ಮೇಶ್ ತೋಟದ, ಈರಣ್ಣ ವಾಲಿಕಾರ, ಅಕ್ಷಯ್ ಜೋಶಿ, ಸುನಿಲ ಜಂಗಾನಿ, ವಿಜಯಕುಮಾರ ಬೆಳ್ಳೇರಿಮಠ, ಮಾರುತಿ, ಪ್ರಶಾಂತ ಲೋಕಾಪುರ, ಕಾಶಿನಾಥ ಗನ್ನಿ ಸೇರಿದಂತೆ ಮುಂತಾದ ಯುವಕರು ಸೇರಿಕೊಂಡು ನೆರೆ ಸಂತ್ರಸ್ತರಿಗೆ ಅಕ್ಕಿ, ಬೇಳೆ ಸೇರಿದಂತೆ ಇನ್ನಿತರ ಆಹಾರ ಸಾಮಗ್ರಿ, ಬಟ್ಟೆ, ಬ್ಲಾಂಕೆಟ್ಸ್, ಹೊದಿಕೆಗಳು, ಬಿಸ್ಕೇಟ್, ಕ್ಯಾಂಡಲ್, ವಾಟರ್ ಬಾಟಲ್ ಸೇರಿದಂತೆ ಮುಂತಾದ ಅಗತ್ಯ ಸಾಮಗ್ರಿಗಳನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.