ಹುಬ್ಬಳ್ಳಿ: ನಾವು ನಮ್ಮ ಸ್ನೇಹಿತರ, ಆತ್ಮೀಯರ, ಪ್ರೀತಿಸುವವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಸಂಭ್ರಮಿಸುತ್ತೇವೆ. ಇನ್ನೂ ಕೆಲವರು ತಾವು ಸಾಕಿದ ನಾಯಿ, ಬೆಕ್ಕುಗಳ ಬರ್ತ್ಡೇ ರಾಯಲ್ ಆಗಿ ಸೆಲೆಬ್ರೇಟ್ ಮಾಡಿದ್ದನ್ನೂ ನೋಡಿದ್ದೀವಿ. ಆದ್ರೆ, ಈ ಸ್ಟೋರಿ ಅವೆಲ್ಲಕ್ಕಿಂತ ಕೊಂಚ ಭಿನ್ನ.
ಹೌದು, ಇಲ್ಲೊಬ್ಬ ಅನ್ನದಾತ ತನ್ನ ಮನೆಯಲ್ಲಿ ಹುಟ್ಟಿ ಬೆಳೆದು ಮನೆಗಾಗಿ ದುಡಿದ ಎತ್ತಿನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ರೈತ ಮಿತ್ರನಿಗೆ ಗೌರವ ಸಲ್ಲಿಸಿದ್ದಾನೆ.
ಈ ರೀತಿ ಅದ್ದೂರಿಯಾಗಿ ರೈತ ಸ್ನೇಹಿಯ ಹುಟ್ಟುಹಬ್ಬ ಆಚರಿಸುತ್ತಿರುವವರು ಗಾಮನಗಟ್ಟಿ ಕುಟುಂಬದ ಸದಸ್ಯರು. ತಾಲೂಕಿನ ಅದರಗುಂಚಿ ಗ್ರಾಮದ ಅಶೋಕ ಗಾಮನಗಟ್ಟಿ ಎನ್ನುವವರಿಗೂ ಈ ಎತ್ತಿಗೂ ಅವಿನಾಭಾವ ಸಂಬಂಧವಿದೆ. ತಮ್ಮ ಮನೆಯ ಎತ್ತನ್ನು ಮನೆ ಸದಸ್ಯನಂತೆ ಕಾಣುವ ಇವರು, ಎತ್ತಿನ ಹುಟ್ಟುಹಬ್ಬ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಎತ್ತನ್ನು ತೊಳೆದು, ಅಲಂಕರಿಸಿ, ಆರತಿ ಬೆಳಗಿ ಕೊನೆಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಸೆಲೆಬ್ರೇಟ್ ಮಾಡಿದ್ದಾರೆ.
1994 ಜುಲೈ 12 ರಂದು ಅದರಗುಂಚಿ ಗ್ರಾಮದಲ್ಲಿ ಈ ಎತ್ತು ಜನಿಸಿತ್ತು. ಗಾಮನಗಟ್ಟಿಯವರ ಮನೆಯಲ್ಲಿ ಸಾಕಿದ ಆಕಳಿಗೆ ಜನಿಸಿದ ಎತ್ತು ಇದಾಗಿದ್ದು, ಇದಕ್ಕೆ 'ರಾಮ' ಎಂದು ನಾಮಕರಣ ಮಾಡಿದ್ದಾರೆ. ಸುಮಾರು 16 ವರ್ಷಗಳ ಕಾಲ ಮನೆತನದ ವ್ಯವಸಾಯದಲ್ಲಿ ಭಾಗಿಯಾಗಿರುವ ರಾಮ ಮನೆಗಾಗಿ ದುಡಿದಿದೆ.
ಇನ್ನು ಇದೇ ಮನೆಯಲ್ಲಿ ಹುಟ್ಟಿ, ಮನೆಯ ವ್ಯವಸಾಯದಲ್ಲಿ ತೊಡಗಿಕೊಂಡ ಎತ್ತನ್ನು ಅದರ ಕೊನೆಗಾಲದಲ್ಲಿ ಮಾರಾಟ ಮಾಡದೆ ಕುಟುಂಬ ಜೋಪಾನವಾಗಿ ಸಾಕುತ್ತಿದೆ. ವಯಸ್ಸಾದ ಮೇಲೆ ಅದೆಷ್ಟೋ ಜನ ಎತ್ತುಗಳನ್ನು ಮಾರಾಟ ಮಾಡುತ್ತಾರೆ. ಆದ್ರೆ, ಈ ಕುಟುಂಬಸ್ಥರು ಎತ್ತನ್ನು ಮಾರಾಟ ಮಾಡದೆ ಒಬ್ಬ ವ್ಯಕ್ತಿಯಂತೆ ಅದನ್ನು ಜೋಪಾನ ಮಾಡಿ ಹುಟ್ಟುಹಬ್ಬ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.