ಹುಬ್ಬಳ್ಳಿ: ಪತ್ನಿಯಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ನಗರದ ಖ್ಯಾತ ವೈದ್ಯರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹುಬ್ಬಳ್ಳಿಯ ಖ್ಯಾತ ನರರೋಗ ತಜ್ಞ ಕ್ರಾಂತಿಕಿರಣ್ ಅವರು ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಡಾ.ಕ್ರಾಂತಿಕಿರಣ ಹಾಗೂ ಶೋಭಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಶೋಭಾ ಕೂಡಾ ಹುಬ್ಬಳ್ಳಿಯ ಖ್ಯಾತ ವೈದ್ಯೆಯಾಗಿದ್ದು, ಇಬ್ಬರೂ ಹುಬ್ಬಳ್ಳಿಯಲ್ಲಿ ಖಾಸಗಿ ಆಸ್ಪತ್ರೆ ಕಟ್ಟಿದ್ದಾರೆ.
ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು ಕಳೆದ ಮೂರು ವರ್ಷಗಳ ಹಿಂದಿನಿಂದಲೂ ದಂಪತಿ ಬೇರೆ-ಬೇರೆ ನೆಲೆಸಿ ಜೀವನ ನಡೆಸುತ್ತಿದ್ದಾರಂತೆ. ಈ ಹಿಂದೆ ಡಾ.ಕ್ರಾಂತಿಕಿರಣ ಅವರು ಪತ್ನಿ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಭಕ್ಷೀಸ್ ಪತ್ರ ರದ್ದು ಕೋರಿ ಮತ್ತು ವಿಚ್ಛೇದನ ಕೋರಿ ದಾವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ಮೋಸ, ವಂಚನೆ, ವಿಶ್ವಾಸದ್ರೋಹ ಪ್ರಕರಣಗಳನ್ನೂ ಸಹ ದಾಖಲಿಸಿದ್ದಾರೆ.
ಈ ಕೇಸ್ಗಳ ನಡುವೆಯೂ ರವಿವಾರ ಸಂಜೆ 5 ಗಂಟೆಯ ಸುಮಾರಿಗೆ ನನ್ನ ಪತ್ನಿ ಶೋಭಾ ಮನೆಗೆ ಬಂದು ಮಕ್ಕಳ ಎದುರಿಗೆ ಅಶ್ಲೀಲವಾಗಿ ಬೈದು, ಮನೆಯಲ್ಲಿದ್ದ ಕೊಡೆಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಡಾ. ಕ್ರಾಂತಿಕಿರಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.