ಧಾರವಾಡ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಅಬಕಾರಿ ಹಾಗೂ ಜಾಗೃತ ದಳಗಳು ನಿರಂತರ ಕಾರ್ಯಾಚರಣೆ ಹಾಗೂ ವಿವಿಧ ಸ್ಥಳಗಳಲ್ಲಿ ನಿಗಾವಹಿಸಿದ್ದು, ನವೆಂಬರ್ 30 ರಿಂದ ಈ (ಡಿ.26)ವರೆಗೆ ಸುಮಾರು 5 ಲಕ್ಷ 85 ಸಾವಿರ ಮೌಲ್ಯದ ಅಕ್ರಮ ಮದ್ಯ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಬಕಾರಿ ಕಾಯ್ದೆ 1956ರ ಅಡಿಯಲ್ಲಿ ಇಲ್ಲಿವರೆಗೆ ಒಟ್ಟು 58 ಪ್ರಕರಣಗಳು ದಾಖಲಾಗಿವೆ. ಅಕ್ರಮವಾಗಿ ಮದ್ಯ ದಾಸ್ತಾನು ಹಾಗೂ ಅನುಮತಿ ಪಡೆಯದೇ ಮದ್ಯ ಸೇವೆನೆಗೆ ಅವಕಾಶ ಮಾಡಿಕೊಟ್ಟ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮಗಳಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮತ್ತು ದಾಳಿ ಮಾಡಿ ಒಟ್ಟು 58 ಪ್ರಕರಣಗಳನ್ನು ದಾಖಲಿಸಿ ಕ್ರಮಕೈಗೊಂಡಿದೆ.
ದಾಳಿಯಲ್ಲಿ ಇಲ್ಲಿವರೆಗೆ ವಿವಿಧ ಸ್ಥಳ ಹಾಗೂ ಅಂಗಡಿಗಳಿಂದ 393.915 ಲೀಟರ್ ಮದ್ಯ, 31.200 ಲೀಟರ್ ಬೀರ್, 1.440 ಲೀಟರ್ ಗೋವಾ ಮದ್ಯ ಸೇರಿ ಒಟ್ಟು 426 ಲೀಟರ್ ಅಕ್ರಮ ಮದ್ಯ ಹಾಗೂ 7 ದ್ವಿಚಕ್ರ, 1 ಟಾಟಾಏಸ್ ಮತ್ತು 1 ಆಟೋ ಸೇರಿ ಒಟ್ಟು 9 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ದಾಳಿಯಲ್ಲಿ ವಶಪಡಿಕೊಂಡ ಅಬಕಾರಿ ವಸ್ತುಗಳ ಮೌಲ್ಯ ರೂ.1,70,500 ಗಳು ಮತ್ತು ರೂ.5,85,000 ಗಳು ವಾಹನಗಳ ಮೌಲ್ಯ ಸೇರಿ ಒಟ್ಟು 7,55,500 ರೂ.ಗಳ ಮೌಲ್ಯದ ಅಕ್ರಮ ಮದ್ಯ ಹಾಗೂ ವಾಹನಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.