ಹುಬ್ಬಳ್ಳಿ(ಧಾರವಾಡ): ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೀಡಾದ ತಾರಿಹಾಳ ಕೈಗಾರಿಕಾ ಪ್ರದೇಶದ ಸ್ಪಾರ್ಕರ್ ತಯಾರಿಕಾ ಘಟಕಕ್ಕೆ ಅವರು ಭೇಟಿ ನೀಡಿದ್ದರು. ಬಳಿಕ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ಈ ಕಾರ್ಖಾನೆಯು ಲೈಸೆನ್ಸ್ ಪಡೆದಿಲ್ಲ. ಕಾನೂನು ಬಾಹಿರವಾಗಿ ಕಾರ್ಖಾನೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಅನಧಿಕೃತವಾಗಿ ನಡೆಸುತ್ತಿರುವ ಕಾರ್ಖಾನೆಗಳ ಬಗ್ಗೆ ಸರ್ವೇಗೆ ಸಚಿವ ಆಚಾರ್ ಸೂಚನೆ
ದುರಂತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸೇರಿದಂತೆ ಶಾಮೀಲಾದವರ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸುತ್ತೇವೆ. ಕಾರ್ಖಾನೆ ಎಂದ ಮೇಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಆದರೆ ಇಲ್ಲಿ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ. ಇದರಿಂದ ಮೂವರು ಜೀವ ಕಳೆದುಕೊಳ್ಳುವಂತಾಯಿತು. ಕಾರ್ಖಾನೆಯಲ್ಲಿ ಒಟ್ಟು 14 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿನ್ನೆ 8 ಜನರಿದ್ದರು ಎಂದು ಸಚಿವರು ಮಾಹಿತಿ ನೀಡಿದರು.