ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯವು ಆಟೊಮೊಬೈಲ್ ತಯಾರಕರ ಆಯ್ಕೆಯ ಉತ್ತಮ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಸುರಕ್ಷಿತ, ವಿಶ್ವಾಸಾರ್ಹ ಮತ್ತು ವಾಹನಗಳಿಗೆ ಸಮಯೋಚಿತ ಸಾರಿಗೆಯಾಗಿದ್ದು ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆಯಿಂದ 4,600 ಕೋಟಿ ರೂ. ಆದಾಯ ಗಳಿಸಿದೆ.
ಹುಬ್ಬಳ್ಳಿಯ ನೈರುತ್ಯ ರೈಲ್ವೆಯು 2022-23ರ ಆರ್ಥಿಕ ವರ್ಷದಲ್ಲಿ 46.7 ಮಿಲಿಯನ್ ಟನ್ ಮೂಲ ಸರಕು ಸಾಗಣೆ ಮಾಡಿದೆ. ಈ ಹಿಂದಿನ 15 ವರ್ಷಗಳಲ್ಲಿ 46 ಮಿಲಿಯನ್ ಟನ್‌ಗಳ ಸರಕು ಸಾಗಣೆಯ ಹಳೆಯ ದಾಖಲೆ ಮುರಿದಿದೆ. 2007-08ರಲ್ಲಿ 46.24 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು ದಾಖಲೆಯಾಗಿತ್ತು.
ಸಿದ್ಧ ಸರಕು ರಫ್ತು: ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ರೈಲ್ವೆ ಇಲಾಖೆ ಪ್ರಮುಖ ಪಾತ್ರವಹಿಸುತ್ತಿದೆ. ರೈಲ್ವೆಯು ತ್ವರಿತ, ಸುರಕ್ಷಿತ, ಆರ್ಥಿಕ ಸಾಗಣೆ, ಬೃಹತ್ ಸರಕು, ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿ ಪೂರೈಕೆ ಹಾಗೂ ಉದ್ಯಮದಿಂದ ಸಿದ್ಧಪಡಿಸಿದ ಸರಕು ರಫ್ತು ಮತ್ತು ದಿನನಿತ್ಯ ಬಳಕೆಯ ವಸ್ತುಗಳನ್ನು ಸಾಗಿಸುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 2.05 ಮಿಲಿಯನ್ ಟನ್ ಖನಿಜ ತೈಲ, 1.07 ಮಿಲಿಯನ್ ಟನ್ ಸಿಮೆಂಟ್, 1.45 ಮಿಲಿಯನ್ ಟನ್ ಸಕ್ಕರೆ ಮತ್ತು 509 ರೇಕ್‌ಗಳ ಆಟೊಮೊಬೈಲ್‌ಗಳನ್ನು ಸಾಗಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ದಿಗ್ಗಜ ಕಂಪನಿಗಳ ಉತ್ತಮ ಗ್ರಾಹಕ: ನೈರುತ್ಯ ರೈಲ್ವೆಯು ಟೊಯೊಟಾ, ಕಿಯಾ, ಸುಜುಕಿ, ಅಶೋಕ್ ಲೇಲ್ಯಾಂಡ್, ಟಿವಿಎಸ್ ಸೇರಿದಂತೆ ಇನ್ನಿತರ ಕಂಪನಿಗಳು ಹೊಸದಾಗಿ ತಯಾರಿಸಿದ ವಾಹನಗಳಿಗೆ, ಪರಿಸರಸ್ನೇಹಿ, ಅಪಘಾತ-ಮುಕ್ತ ಹಾಗೂ ಸರಿಯಾದ ಸಮಯಕ್ಕೆ ಸಾಗಿಸುವ ಮೂಲಕ ರೈಲ್ವೆಯು ಆಟೊಮೊಬೈಲ್ ತಯಾರಿಕರ ಪ್ರಮುಖ ಆಯ್ಕೆಯ ಸಾರಿಗೆಯಾಗಿ ಹೊರಹೊಮ್ಮಿದೆ.
"ಪ್ರಸ್ತುತ ಅಭಿವೃದ್ಧಿ ನಡೆಯುತ್ತಿರುವ ಜೋಡಿ ಮಾರ್ಗ, ವಿದ್ಯುದೀಕರಣಕ್ಕೆ ಟ್ರಾಫಿಕ್ ಬ್ಲಾಕ್‌ಗಳ ಅಗತ್ಯಗಳನ್ನು ಪೂರೈಸುವ ಹೊರತಾಗಿ ಸರಕು ಸಾಗಣೆಯಲ್ಲಿ ಸಾರ್ವಜನಿಕ ಮತ್ತು ರೈಲ್ವೆ ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ಯೋಜನೆ ರೂಪಿಸಿ ದಾಖಲೆ ನಿರ್ಮಿಸಿದೆ. ದೇಶದ ಆರ್ಥಿಕತೆಯ ಬೆಳವಣಿಗೆಯ ಅಗತ್ಯಗಳ ಅನುಗುಣವಾಗಿ ರೈಲ್ವೆಯ ಶ್ರಮಿಸುತ್ತಿದೆ" ಎಂದು ನೈರುತ್ಯ ರೈಲ್ವೆ ಪ್ರಧಾನ ಮುಖ್ಯ ಪರಿಚಾಲನಾ ವ್ಯವಸ್ಥಾಪಕ ಹರಿಶಂಕರ್ ವರ್ಮಾ ತಿಳಿಸಿದ್ದಾರೆ.
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಈ ದಾಖಲೆ ನಿರ್ಮಿಸಲು ಶ್ರಮಿಸಿದ ನೈರುತ್ಯ ರೈಲ್ವೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಪ್ರಶಂಸಿಸಿದ್ದಾರೆ. ಹೆಚ್ಚಿನ ಸರಕು ಸಾಗಣೆ ಮಾಡುವ ಮೂಲಕ ಹೆಚ್ಚು ಆದಾಯ ಸಾಧಿಸಲು ಬೆಂಬಲ ನೀಡಿದ ದಿಗ್ಗಜ ಕಂಪನಿ ಗ್ರಾಹಕರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂಓದಿ: 4 ಬಿಲಿಯನ್ಗೆ ತಲುಪಿದ ಇ-ಕಾಮರ್ಸ್ ಶಿಪ್ಮೆಂಟ್ಸ್ : 2028ಕ್ಕೆ 10 ಬಿಲಿಯನ್ಗೆ ತಲುಪುವ ಸಾಧ್ಯತೆ