ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಈ ಭಾಗದ ಜನರ ಸಂಜೀವಿನಿಯಾಗಿದೆ. ಈಗಾಗಲೇ ಸಂಸ್ಥೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬೆಂಗಳೂರು ಹಾಗೂ ಮೈಸೂರು ಭಾಗದ ಆಸ್ಪತ್ರೆಗಳಿಗೆ ನೀಡುವ ಅನುದಾನದಂತೆ ಕಿಮ್ಸ್ ಆಸ್ಪತ್ರೆ ನಿರ್ವಹಣೆಗೆ ವಾರ್ಷಿಕ 24 ಕೋಟಿ ರೂ ಹಾಗು ಇದರ ಹೊರತಾಗಿ ಹೆಚ್ಚುವರಿಯಾಗಿ ರೂ. 30 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಆಸ್ಪತೆಗೆ ಬರುವ ರೋಗಿಗಳಿಗಾಗಿ ಆನ್‌ಲೈನ್ ಮೂಲಕ ಒಪಿಡಿ ನೋಂದಣಿ ಆರಂಭಿಸಲಾಗಿದೆ. ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಕಿಡ್ನಿ ಕಸಿ, ಮೂಳೆ ಮಜ್ಜೆಯ ಕಸಿ, ಕಿಡ್ನಿ ಕಸಿ, ತೆರೆದ ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಪ್ಯಾರಾ ಮೆಡಿಕಲ್ ಕೋರ್ಸ್ ಕೂಡ ಆರಂಭಿಸಲಾಗಿದ್ದು, ಪ್ಯಾರಾ ಮೆಡಿಕಲ್ ಕಾಲೇಜ್ ಆರಂಭಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೌಚಾಲಯ, ಪಾರ್ಕಿಂಗ್ ಸಮಸ್ಯೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಹೀಗಾಗಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದರು.
"ಆಸ್ಪತ್ರೆ ಒಳಗಡೆ ಉಗುಳುವುದನ್ನು ನಿಷೇಧಿಸಲಾಗಿದೆ. ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಆಸ್ಪತ್ರೆಗೆ ಅವಶ್ಯಕವಾಗಿರುವ ವಿದ್ಯುತ್ ಅನ್ನು ಹೆಸ್ಕಾಂ ಒದಗಿಸುತ್ತಿದೆ. ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಯಶಸ್ವಿನಿ, ಆರೋಗ್ಯ ಸಂಜೀವಿನಿ ಸೇರಿದಂತೆ ವಿವಿಧ ಯೋಜನೆಗಳಡಿಯಲ್ಲಿ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಆಸ್ಪತ್ರೆ ಹಾಗೂ ಕಾಲೇಜ್‌ಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಕಾಲ ಕಾಲಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ" ಎಂದು ತಿಳಿಸಿದರು.
"ಆಸ್ಪತ್ರೆ ಒಳಗಡೆ ಕ್ಯಾಂಟೀನ್ ಆರಂಭಿಸುವ ಕುರಿತು ಹಲವಾರು ಜನರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಈಗಾಗಲೇ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಡಯಟ್, ಶುಭ್ರವಾದ ಬಟ್ಟೆಗಳು, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಇನ್ಫೋಸಿಸ್ ಧರ್ಮಶಾಲಾ ಸೇವೆ ಸೇರಿದಂತೆ ಇತರೆ ಕಾರ್ಯಗಳು ನಡೆಯುತ್ತಿವೆ" ಎಂದರು.
ಕಿಮ್ಸ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು: ಕಿಮ್ಸ್‌ನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ನವೀಕರಣ, 23 ಕೋಟಿ ರೂ ವೆಚ್ಚದಲ್ಲಿ 2 ಹೊಸ ಪದವಿ ಪೂರ್ವ ವಸತಿ ನಿಲಯಗಳ ನಿರ್ಮಾಣ, ಎನ್ಇಎಲ್ಸಿ ಸ್ಕಿಲ್ ಲ್ಯಾಬ್, ತುರ್ತು ಚಿಕಿತ್ಸಾ ಘಟಕ ಆರಂಭ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ರೋಟರಿ ಸಹಾಯಧನದಿಂದ ಕಿಮ್ಸ್ ಮುಂಭಾಗ ಮತ್ತು ಹಿಂಭಾಗದ ದ್ವಾರ ಬಾಗಿಲುಗಳ ನವೀಕರಣ, 2ನೇ ಕ್ಯಾಥ್ ಲ್ಯಾಬ್ ಸ್ಥಾಪನೆ, ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆ ಸೂಪರ್ ಸ್ಪೆಷಾಲಿಟಿ ಕಟ್ಟಡ ಆರಂಭ, ಆಸ್ಪತ್ರೆಯನ್ನು 2404 ಬೆಡ್‌ಗಳಿಗೆ ಮೇಲ್ದರ್ಜೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆಯಿಂದ ಸಂಕಷ್ಟ: ಸಚಿವ ರಾಮಲಿಂಗಾರೆಡ್ಡಿ ಎದುರು ಮಹಿಳೆಯರ ಕಣ್ಣೀರು