ಹುಬ್ಬಳ್ಳಿ: ಜಿಲ್ಲೆಯಲ್ಲಿ ಮೊದಲು 9 ಬೆಳೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸದ್ಯ 7 ಹೆಚ್ಚುವರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 16 ಕೇಂದ್ರಗಳು ರೈತರ ಬೆಳೆಗಳನ್ನು ಯೋಗ್ಯಬೆಲೆಯಲ್ಲಿ ಖರೀದಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮನೇನಕೊಪ್ಪ ಹೇಳಿದ್ದಾರೆ.
ರೈತರ ಬೆಳೆಗಳನ್ನು ವ್ಯವಸಾಯ ಸೇವಾ ಸಹಕಾರ ಸಂಸ್ಥೆಗೆ ನೀಡಿದರೆ, ನೇರವಾಗಿ ಅವರ ಖಾತೆಗೆ ಹಣ ನೀಡುವ ಅವಕಾಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿಕೊಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಪರವಾಗಿ ಹೆಸರು ಬೇಳೆ, ಹತ್ತಿ, ಮೆಕ್ಕೆಜೋಳ ಹಾಗೂ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡುತ್ತಿದೆ. ರೈತರ ಬೆಳೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದರೆ ಅಧಿಕಾರಿಗಳ ಹಾಗೂ ನಮ್ಮ ಗಮನಕ್ಕೆ ತರಬೇಕು ಎಂದರು.
ಸಚಿವ ಸಂಪುಟ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸುವಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದರು. ಅದರಂತೆ ಕ್ಯಾಬಿನೆಟ್ನಲ್ಲಿ ರೈತರ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಪ್ರಸ್ತಾಪ ಮಾಡಿದ್ದೇನೆ. ಎರಡು ದಿನಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಹೆಸರು ಬೇಳೆ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಹು-ಧಾ ಪಾಲಿಕೆ ಚುನಾವಣೆ: ಒಂದು ಆಟೋ, ಒಂದು ಬ್ಯಾನರ್.. ಅಭ್ಯರ್ಥಿ ಸೇರಿ ಗರಿಷ್ಠ 5 ಜನರಿಂದ ಪ್ರಚಾರಕ್ಕೆ ಅನುಮತಿ
ಹೆಸರು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರೈತರ ಬೆಳೆಗೆ ತಕ್ಕ ಬೆಲೆ ಒದಗಿಸುವ ನಿಟ್ಟಿನಲ್ಲಿ ಈ ವರ್ಷ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಹೆಸರುಕಾಳು ಪ್ರತಿ ಕ್ವಿಂಟಾಲಿಗೆ 7,275 ರೂ. ಹಾಗೂ ಉದ್ದಿನಕಾಳು ಪ್ರತಿ ಕ್ವಿಂಟಾಲಿಗೆ 6,300 ರೂ. ಬೆಲೆ ನಿಗದಿ ಮಾಡಿದ್ದು, ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರೀದಿ ಕೆಂದ್ರಗಳ ಸಂಖ್ಯೆಯನ್ನು 9 ರಿಂದ 16ಕ್ಕೆ ಏರಿಸಿ, ಉತ್ಪನ್ನ ಮಾರಾಟ ಪ್ರಮಾಣವನ್ನು 6 ಕ್ವಿಂಟಾಲ್ಗೆ ಹೆಚ್ಚಿಸಲಾಗಿದೆ ಎಂದರು.
ಉತ್ತಮ ಬೆಂಬಲ ಬೆಲೆಯೊಂದಿಗೆ ಎಲ್ಲೆಡೆ ಖರೀದಿ ಕೆಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ರೈತರಿಗೆ ಇದರಿಂದ ಸದುಪಯೋಗವಾಗಿದೆ. ರೈತರು ಎಪಿಎಂಸಿ ಹಾಗೂ ಬೆಳೆ ಖರೀದಿ ಕೇಂದ್ರಗಳಲ್ಲಿ ಸಹ ಉತ್ಪನ್ನ ಮಾರಾಟ ಮಾಡಬಹುದು. ನೇರ ಖರೀದಿ ಹಾಗೂ ಮಾರಾಟ ಮಾಡಲು ರೈತರು ಸ್ವತಂತ್ರರು, ಅವರಿಗೆ ಅವಕಾಶವಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಎಲ್ಲರೂ ಬೆಂಬಲ ನೀಡಿ ಎಂದು ಹೇಳಿದರು.
ಓದಿ: ಗಸ್ತು ವಾಹನಕ್ಕೆ ಕಾರು ಡಿಕ್ಕಿ: ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ