ದಾವಣಗೆರೆ : ವನ್ಯ ಜೀವಿಗಳ ಸಾಕಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದಾಗಿದ್ದು, ನ್ಯಾಯಕ್ಕೆ ಬೆಲೆ ಇದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಈ ಕುರಿತು ಪ್ರತಿಕ್ರಿಯಿಸಿದ ಅವರು, ಎಫ್ಐಆರ್ ರದ್ದಾಗಿರುವ ಬಗ್ಗೆ ನನಗೆ ಲಿಖಿತ ರೂಪದಲ್ಲಿ ಸಿಕ್ಕಿಲ್ಲ. ಸಿಕ್ಕ ನಂತರ ಪ್ರತಿಕ್ರಿಯೆ ನೀಡುತ್ತೇನೆ. ನನಗಿಂತ ನಿಮಗೆ ಮೊದಲು ಗೊತ್ತಾಗಿದೆ. ಈ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತ್ತು. ನ್ಯಾಯಕ್ಕೆ ಬೆಲೆ ಇದೆ. ರಿಪೋರ್ಟ್ ಬರಲಿ ಮುಂದೆ ಕಾದು ನೋಡಿ. ಯಾರ್ಯಾರ ಬಳಿ ಏನಿದೆ? ಎಲ್ಲಿದೆ? ಎಲ್ಲ ಹೇಳುತ್ತೇನೆ ಎಂದರು.
ಪಕ್ಷದ ಮುಖಂಡ ವಿನಯ್ ಕುಮಾರ್ ಅವರು ಲೋಕಸಭಾ ಟಿಕೆಟ್ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಹೇಳಿರುವುದು ಸರಿಯಾಗಿದೆ. ಕಾಂಗ್ರೆಸ್, ಕಾರ್ಯಕರ್ತರಿಗೆ ಮಣೆ ಹಾಕುತ್ತದೆ. ಬಾವುಟ ಹಿಡಿದು, ಪೋಸ್ಟರ್ ಹಚ್ಚಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಎಲ್ಲೋ ಇದ್ದುಕೊಂಡು ಬಂದರೆ ನಡೆಯಲ್ಲ. ಚನ್ನಗಿರಿ ಶಾಸಕ ಈ ಕುರಿತು ಮಾತನಾಡಿರುವುದನ್ನು ನೋಡಿದ್ದೇನೆ. ಎಲ್ಲರೂ ಕಾರ್ಯಕರ್ತರೇ, ಮೊದಲು ಕಾರ್ಯಕರ್ತರನ್ನು ಗುರುತಿಸಬೇಕು.
ಇದನ್ನೂ ಓದಿ : ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಮುಗಿದು ಹೋದ ಕಥೆ ಎಂದ ಶಾಮನೂರು ಶಿವಶಂಕರಪ್ಪ
ಕಾರ್ಯಕರ್ತರನ್ನು ಕೂಡಿಸಿ, ಕಾಳಪ್ಪ ಯಾರು ಬೋಳಪ್ಪ ಯಾರು ಅಂತ ಗುರುತಿಸಬೇಕು. ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರನ್ನು ಗುರುತಿಸಿ ಮಾತನಾಡಬೇಕು. ಸುಮ್ನೆ ಎಲ್ಲಿಂದಲೋ ಬಂದು ಮಾಡಿದರೆ ಆಗುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದು ಪರೋಕ್ಷವಾಗಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮತ್ತು ವಿನಯ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ಹಿನ್ನೆಲೆ ಏನು? : 2022ರ ಡಿಸೆಂಬರ್ 18 ರಂದು ಬೆಂಗಳೂರು ನಗರದ ಹೆಬ್ಬಾಳದಲ್ಲಿ ಈ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ಸೆಂಥಿಲ್ ಎಂಬ ವ್ಯಕ್ತಿ ಜಿಂಕೆ ಚರ್ಮ, ಜಿಂಕೆ ಕೊಂಬು, ಜಿಂಕೆ ಮೂಳೆ ಮಾರಾಟ ಮಾಡಲು ಬಂದಿದ್ದ. ಈ ವೇಳೆ, ಆತ ಸಿಸಿಬಿ ಪೋಲಿಸರ ಬಲೆಗೆ ಬಿದ್ದಿದ್ದ. ಆತನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಬಾಯ್ಬಿಟ್ಟಿದ್ದನು.
ಈ ಮಾಹಿತಿ ಆಧರಿಸಿ ಎಸ್.ಎಸ್ ಮಲ್ಲಿಕಾರ್ಜುನ್ ಒಡೆತನದ ಮಿಲ್ ಹಿಂಭಾಗದ ಫಾರ್ಮ್ ಹೌಸ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಎರಡು ನರಿಗಳು, 10 ಕೃಷ್ಣಮೃಗಗಳು, ಏಳು ಚುಕ್ಕೆ ಜಿಂಕೆಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು ಪತ್ತೆಯಾಗಿದ್ದವು. ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಅಲ್ಲದೆ, ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ನ್ಯಾಯಾಲಯವನ್ನು ಕೋರಲಾಗಿತ್ತು.
ಇದನ್ನೂ ಓದಿ : ಕೋಳಿ ಸಾಕಾಣಿಕೆ ಕೃಷಿ ಚಟುವಟಿಕೆ.. ತೆರಿಗೆ ವಿಧಿಸಲು ಗ್ರಾಮ ಪಂಚಾಯ್ತಿಗೆ ಅವಕಾಶವಿಲ್ಲ: ಹೈಕೋರ್ಟ್