ದಾವಣಗೆರೆ: ಅಸಾಮಿಯೊಬ್ಬ ಸ್ಮಶಾನಕ್ಕೆ ತೆರಳುವ ದಾರಿಯಲ್ಲೇ ಎರಡು ಮನೆಗಳನ್ನು ನಿರ್ಮಾಣ ಮಾಡಿ ಇಡೀ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೆ ಅಸಾಮಿ ಮೂಲ ನಕಾಶೆಯನ್ನು ಬದಲಾವಣೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳುವ ದಾರಿಯಲ್ಲೇ ಅನಧಿಕೃತವಾಗಿ ಜಯಪ್ಪ ಹಾಗೂ ನಾರಪ್ಪ ಎಂಬುವವರು ಮನೆಗಳನ್ನು ನಿರ್ಮಿಸಿದ್ದಾರೆ ಎನ್ನಲಾಗಿದೆ. ಸರ್ವೇ ನಂಬರ್ 12, 13 ರಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
1901 ರ ಬ್ರಿಟಿಷ್ ನಕಾಶೆ ಪ್ರಕಾರ ಯರಗುಂಟೆ ಗ್ರಾಮದಲ್ಲಿ ಸ್ಮಶಾನದ ದಾರಿಗೆ ಬಂಡಿ ದಾರಿ ಎಂದು ಬಿಡಲಾಗಿತ್ತು. ಅದೇ ನಕಾಶೆಯನ್ನು 2001 ರಲ್ಲಿ ಮನೆ ಮಾಲೀಕರಾದ ಜಯಪ್ಪ ಹಾಗೂ ನಾರಪ್ಪ ತಿದ್ದುಪಡಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಆದರೆ, ಗ್ರಾಮಸ್ಥರು ಹೇಳುವ ರೀತಿ ರಸ್ತೆಯಲ್ಲಿ ನಾವು ಮನೆ ನಿರ್ಮಾಣ ಮಾಡಿಲ್ಲ. ಈ ದಾರಿ ಬದಲಿಗೆ ಇಲ್ಲಿ ಎದುರಾಗುವ ದೇವಸ್ಥಾನ ಇರುವುದೇ ದಾರಿ ಎಂದು ನಕಾಶೆ ತಯಾರಿಸಿದ್ದಾರೆ.
ಇದಕ್ಕೆ ಒಪ್ಪದ ಜನ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದಲ್ಲದೇ ದೇವಸ್ಥಾನ ಇರುವುದೇ ರಸ್ತೆಯಲ್ಲಿ ಅಲ್ಲಿಂದನೇ ದಾರಿ ಆರಂಭವಾಗಿ ಎಂದು ಭೂ ಮಾಪನ ಇಲಾಖೆಯವರು ಕೂಡ ಸರ್ವೆ ಮಾಡಿ ಮಾರ್ಕ್ ಮಾಡಿದ್ದಾರೆ. ಅದೇ 1901ರ ನಕಾಶೆ ಪ್ರಕಾರ ದಾರಿಯಲ್ಲೇ ಮನೆ ನಿರ್ಮಾಣ ಮಾಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿದು ಬರುತ್ತಿದ್ದು, ಈ ಮೂಲ ನಕಾಶೆಯನ್ನು ಸರ್ವೇ ಅಧಿಕಾರಿಗಳು ತಿದ್ದುಪಡಿ ಮಾಡಿ ಮನೆ ಉಳಿಸಲು ಪ್ರಯತ್ನ ಮಾಡಿದ್ದಾರೆಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಇದಲ್ಲದೆ ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿರುವ ವ್ಯಕ್ತಿಗಳು ತಿದ್ದುಪಡಿ ಮಾಡಿರುವ ನಕಾಶೆ ಪ್ರಕಾರ ಸರ್ವೆ ಮಾಡಿರುವ ಅಧಿಕಾರಿಗಳು ಮನೆಗಳನ್ನು ಉಳಿಸುವ ರೀತಿಯಲ್ಲಿ ಮಾರ್ಕ್ ಮಾಡಿದ್ದಾರಂತೆ.
ಇನ್ನು ಈ ರಸ್ತೆಯ ಅಕ್ಕ ಪಕ್ಕದಲ್ಲಿ ದಾನವಾಗಿ ಕೆಲವರು ಬರೆದುಕೊಟ್ಟ ಜಾಗ ಒಟ್ಟು 13 ಗುಂಟೆ ಇದ್ದು, ಗ್ರಾಮದ ಅಭಿವೃದ್ಧಿಗೆಂದು ಬರೆದುಕೊಡಲಾಗಿತ್ತು. ಇದೀಗ ಯರಗುಂಟೆ ಗ್ರಾಮ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬಂದಿದ್ದು, 45 ನೇ ವಾರ್ಡ್ ಆಗಿ ಮಾರ್ಪಾಡಾದ ಬಳಿಕ 13 ಗುಂಟೆ ಜಾಗ ಹಾಗೂ ರಸ್ತೆ ಪಾಲಿಕೆಗೆ ಸೇರುತ್ತದೆ. ಹೀಗಾಗಿ ರಸ್ತೆ ನಿರ್ಮಾಣ ಮಾಡಲು ಪಾಲಿಕೆಯಿಂದ 21 ಲಕ್ಷ ರೂ. ಟೆಂಡರ್ ಆಗಿದ್ದು, ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಿದ ನಾರಪ್ಪ ಹಾಗೂ ಜಯಪ್ಪ ಇಬ್ಬರು ರಸ್ತೆ ನಿರ್ಮಾಣ ಮಾಡದಂತೆ ತಡೆ ಹಿಡಿದಿದ್ದಾರೆ.
ಇದರಿಂದ ಸ್ಮಶಾನಕ್ಕೆ ತೆರಳಲು ಜನರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಆಕ್ರೋಶ ಹೊರ ಹಾಕಿರುವ ಗ್ರಾಮಸ್ಥರು, 1901 ರ ಹಳೆ ನಕಾಶೆ ಪ್ರಕಾರ ಎರಡು ಮನೆಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.