ದಾವಣಗೆರೆ: ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಸಣ್ಣತನ ಇಟ್ಟುಕೊಂಡವನು ಯಾವತ್ತೂ ದೊಡ್ಡವನಾಗಲಾರ ಎಂದು ಶಾಸಕ ಬಸವನಗೌಡ ಯತ್ನಾಳ್ ಅವರಿಗೆ ಹರಿಹರದ ಪಂಚಮಸಾಲಿ ಮಠದ ವಚನಾನಂದ ಶ್ರೀ ಟಾಂಗ್ ಕೊಟ್ಟರು. ಬಿ ಎಸ್ ಯಡಿಯೂರಪ್ಪನವರಿಂದ ಸ್ವಾಮೀಜಿ 10 ಕೋಟಿ ರೂ ಪಡೆದಿರುವ ಆರೋಪದ ಕುರಿತು ಅವರು ಮಠದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಕಾಮಿಡಿ ಮಾಡುವವರನ್ನು ಕಾಮಿಡಿ ಮಾಡಲು ಬಿಡಿ. ಆರೋಪ ಮಾಡುವರ ವಿರುದ್ಧ ತನಿಖೆ ನಡೆಸಿ, ಸತ್ಯ ಹೊರಬರಲಿ. ಇಂಥವರ ಬಗ್ಗೆ ಮೌನವಹಿಸಿದರೆ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದು ಸ್ವಾಮೀಜಿ ಹೇಳಿದರು.
ಮೀಸಲಾತಿ ಹೋರಾಟದ ವಿಚಾರವಾಗಿ ಮಾತನಾಡುತ್ತಾ, ಅಂದು ಹೋರಾಟ ಶುರುವಾದಾಗ ಎಲ್ಲಿದ್ದರು?, ಆಗ ಹೋರಾಟ ಮಾಡುವ ಬದಲು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದರು. ನಾವು ಹೋರಾಟ ಶುರು ಮಾಡಿದ ಮೇಲೆ ಈಗ ಬಂದು ಲಾಭ ಪಡೆಯುತ್ತಿದ್ದಾರೆ. ಪಾದಯಾತ್ರೆಯನ್ನು ಕೂಡ ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು ಎಂದರು.
2ಎ ಮೀಸಲಾತಿ ಬಗ್ಗೆ ಸಿಎಂ ಜೊತೆ ಸುಧೀರ್ಘ ಸಭೆ ಆಗಿದೆ. ವರದಿ ತರಿಸಿಕೊಂಡು ಅದಷ್ಟು ಬೇಗ ಮೀಸಲಾತಿ ನೀಡುವಂತೆ ಮನವಿ ಮಾಡಿದ್ದೇವೆ. ಜಯಪ್ರಕಾಶ್ ಹೆಗ್ಡೆಯವರು ವರದಿಯ ಸಿದ್ಧತೆಯಲ್ಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಡಿಕೆಶಿ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದು, ಅವರು ಕೂಡ ನಿಮ್ಮ ಪರವಾಗಿ ನಾವು ಇದ್ದೇವೆ ಎಂದು ಭರವಸೆ ನೀಡಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ :ವಸಂತ ಕಾಲ ಬಂದಾಗ ಕಾಗೆ, ಕೋಗಿಲೆ ಯಾವುದೆಂದು ಗೊತ್ತಾಗುತ್ತದೆ: ಯತ್ನಾಳ್‌ಗೆ ವಚನಾನಂದ ಶ್ರೀ ತಿರುಗೇಟು