ದಾವಣಗೆರೆ: ಬಿ ಎಸ್ ಯಡಿಯೂರಪ್ಪ ಅವರು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಶ್ರೇಷ್ಠ ನಾಯಕ ಎಂದು ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು. 24ನೇ ವೀರಶೈವ ಲಿಂಗಾಯತ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಉಜ್ಜಯಿನಿ ಪೀಠದ ಶಿವಾಚಾರ್ಯ ಶ್ರೀ ಮಾತನಾಡಿದರು. ಈ ವೇಳೆ, ವೃತ್ತಿಯಿಂದ ಸಾಮಾನ್ಯವಾಗಿ ಎಲ್ಲರೂ ನಿವೃತ್ತರಾಗುತ್ತಾರೆ. ಆದರೆ, ಬಿಎಸ್ ಯಡಿಯೂರಪ್ಪ ಅವರು ನಿವೃತ್ತರಾಗಿಸಲಾಗಿದೆ. ಬಿಎಸ್ವೈ ಪದವಿಗಳಿಂದ ನಿವೃತ್ತರಾಗಿದ್ದಾರೆಯೇ ಹೊರತು ಪ್ರವೃತ್ತಿಗಳಿಂದ ಅಲ್ಲ ಎಂದರು. ಮುಂದೇ ಕೂಡ ಸಮಾಜವನ್ನು ಕಟ್ಟುವಂತಹ, ಎಲ್ಲರಿಗೂ ನಾಯಕನಾಗುವಂತಹ, ಮುಂದಿನ ನಾಯಕರನ್ನು ಬೆಳೆಸುವಂತ ಶಕ್ತಿಯನ್ನು ಭಗವಂತ ಯಡಿಯೂರಪ್ಪ ಅವರಿಗೆ ನೀಡಲಿ ಎಂದು ಇದೇ ವೇಳೆ ಶ್ರೀಗಳು ಆಶಿಸಿದರು.
ಸರ್ಕಾರ ಜಾತಿ ಗಣತಿಗೂ ಮುನ್ನ ಅಖಿಲ ಭಾರತ ವೀರಶೈವ ಮಹಾಸಭಾ ಜಾತಿ ಗಣತಿ ಮಾಡಬೇಕು. ವೀರಶೈವ ಒಳಪಂಗಡಗಳು ಎಲ್ಲವನ್ನು ಮರೆತು ಒಗ್ಗೂಡಬೇಕಾಗಿದೆ. ಜಾತಿಗಣತಿ ಕಾಲಂನಲ್ಲಿ ಉಪಜಾತಿಗಳಿದ್ದರೂ, ಅದನ್ನು ಬಿಟ್ಟು ವೀರಶೈವ ಲಿಂಗಾಯತ ಎಂದು ನಾವೆಲ್ಲ ನಮೂದಿಸಬೇಕಾಗಿದೆ. ಸರ್ಕಾರ ಜಾತಿ ಗಣತಿ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಹಾಸಭಾದಿಂದಲೇ ಜಾತಿ ಗಣತಿ ಮಾಡಿ ಅಂಕಿ - ಅಂಶಗಳನ್ನು ಶೇಖರಿಸಿ ಇಟ್ಟುಕೊಳ್ಳಿ ಎಂದು ಶಾಮನೂರು ಶಿವಶಂಕರಪ್ಪ ಅವರಿಗೆ ಹೇಳಿದ್ದೆ ಎಂದು ತಿಳಿಸಿದರು.
ಮುಂದುವರೆದು, ಎಷ್ಟೇ ಗಾತ್ರದ ಕೊಡಲಿಗಳು ಹುಟ್ಟಲಿ, ಇಲ್ಲ ಬರಲಿ. ನಮ್ಮವರು ಅವರ ಜೊತೆ ಇರಬೇಕು. ಶಾಮನೂರು ಶಿವಶಂಕರಪ್ಪ ಅದನ್ನು ಮಾಡಿಕೊಂಡು ಬಂದಿದ್ದಾರೆ. ಯಾವುದೇ ಕೊಡಲಿಗೆ ಕಾವು ಆಗದಿರಲಿ. ಜತೆಗೆ, ಧರ್ಮದ ಚಿಹ್ನೆಯನ್ನು ಧರಿಸಬೇಕು. ವಿಭೂತಿ ಧರಿಸಿ ಸಂಸ್ಕಾರವಂತರಾಗಬೇಕು ಎಂದ ಉಜ್ಜಯಿನಿ ಶ್ರೀ ಹೇಳಿದರು.
ಲಿಂಗಾಯತ ಅನ್ನುವುದು ಜಾತಿ ಅಲ್ಲ ಧರ್ಮ ಸಿದ್ಧಾಂತ -ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ: ಶಿವಾಚಾರ್ಯ ಶ್ರೀಗಳ ಬಳಿಕ ಮಾತನಾಡಿದ ತರಳಬಾಳು ಶಾಖಾ ಮಠದ ಸಾಣೇಹಳ್ಳಿ ಪಂಡಿತರಾಧ್ಯ ಶ್ರೀಗಳು ಮಾತನಾಡಿ, ಲಿಂಗಾಯತರು ಒಂದಾಗಬೇಕೆಂಬುದು ಎಲ್ಲರ ಆಶಯ. ಲಿಂಗಾಯತ ಅನ್ನೋದು ಜಾತಿ ಅಲ್ಲ, ಅದೊಂದು ಧರ್ಮ ಸಿದ್ಧಾಂತ ಎಂದು ಪಂಡಿತರಾಧ್ಯ ಶ್ರೀ ತಿಳಿಸಿದರು. ನಾವೆಲ್ಲರೂ ಒಂದಾದರೆ ಲಿಂಗಾಯತ ವಿಶ್ವಧರ್ಮವಾಗುತ್ತದೆ. 856 ಕೋಡ್ವರ್ಡ್ ಮಾಡಿಕೊಳ್ಳಬೇಕು. ನಾವು ಇಷ್ಟ ಲಿಂಗದಾರಿಗಳಾಗಬೇಕಾಗಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಂಘಟಿತರಾಗಬೇಕು. ನಡೆನುಡಿ ಸಿದ್ಧಾಂತದಲ್ಲಿ ಶುದ್ಧತೆ ಇರಬೇಕು. ನಮ್ಮ ಸಮಾಜದವರು ಆಡುವುದೇ ಒಂದು ಮಾಡುವುದೇ ಒಂದಾಗಿದೆ. ಹಾಗಾಗಿ ಎಲ್ಲರೂ ವರ್ತನೆಗಳನ್ನು ತಿದ್ದಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಯಾವುದೇ ಧರ್ಮವನ್ನು ಅತಿಯಾಗಿ ಓಲೈಸದೆ ಅನುದಾನವನ್ನು ಸಮಾನವಾಗಿ ಹಂಚಿ: ಯಡಿಯೂರಪ್ಪ