ದಾವಣಗೆರೆ : 'ತುಂಗಾ 777 ಚಾರ್ಲಿ' ಈ ಶ್ವಾನ ಪೊಲೀಸರ ಬೆನ್ನೆಲುಬಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪೊಲೀಸ್ ಶ್ವಾನ ಆರೋಪಿಗಳ ಪಾಲಿಗೆ ಸಿಂಹ ಸ್ವಪ್ನವಾಗಿದ್ದು, ಪೊಲೀಸರಿಗೆ ಕಂಡು ಹಿಡಿಯಲು ಆಗದಂತಂಹ ಪ್ರಕರಣಗಳನ್ನು ಈ ತುಂಗಾ ಭೇದಿಸಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದ ರೇಪ್ ಆ್ಯಂಡ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಈ ತುಂಗಾ ಪ್ರಮುಖ ಪಾತ್ರ ವಹಿಸಿದೆ.
ಹೌದು, ಜೂನ್ 22ರಂದು ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಗೃಹಿಣಿಯ ಮನೆಗೆ ನುಗ್ಗಿ ಕಾಮುಕನೋರ್ವ ಅತ್ಯಾಚಾರವೆಸಗಿ ಬಳಿಕ ಮಹಿಳೆಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಹರೀಶ್ (32) ಎಂಬಾತನನ್ನು ಬಂಧಿಸಿದ್ದರು.
ಅತ್ಯಾಚಾರದ ಆರೋಪಿ ಪತ್ತೆ ಹಚ್ಚಿದ್ದು ಶ್ವಾನ "ತುಂಗಾ ಚಾರ್ಲಿ 777" : ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಶ್ವಾನ ದಳದ ತುಂಗಾ ಹಾಗೂ ಶ್ವಾನ ನಿರ್ವಾಹಕರಾದ ಕೆ.ಎಂ. ಪ್ರಕಾಶ ಮತ್ತು ಎಂ.ಡಿ, ಷಫಿ ಅವರು ಭಾಗವಹಿಸಿದ್ದರು. ಅತ್ಯಾಚಾರ ಮತ್ತು ಕೊಲೆ ನಡೆದ ಸ್ಥಳದಿಂದ ಆರೋಪಿ ಜಾಡನ್ನು ಹಿಡಿದ ತುಂಗಾ ಅಲ್ಲಿಂದ ನೇರವಾಗಿ ಆರೋಪಿ ಹರೀಶ್ ನ ಮನೆ ಬಳಿ ಬಂದು ನಿಂತಿತ್ತು.
ಕೊಲೆ ಮಾಡಿದ ಹರೀಶ್ ಬಚ್ಚಲು ಮನೆಯಲ್ಲಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿದ್ದ. ಆರೋಪಿಯು ಸ್ನಾನ ಮಾಡಿದ್ದ ಬಚ್ಚಲು ಮನೆ ಪ್ರವೇಶಿಸಿದ್ದ ತುಂಗಾ ಆರೋಪಿ ಇವನೇ ಎಂದು ಗುರುತಿಸಿತ್ತು. ಈ ರೀತಿಯಲ್ಲಿ ಆರೋಪಿ ಹರೀಶನನ್ನು ಬಂಧಿಸಲು ಈ ತುಂಗಾ ಸಹಕರಿಸಿದೆ. ಹೀಗೆ ತುಂಗಾ 777 ಚಾರ್ಲಿ ಶ್ವಾನದ ಸಹಾಯದಿಂದ ಪ್ರಕರಣವನ್ನು ಭೇದಿಸಲು ಸಹಾಯವಾಗಿದೆ.
ತುಂಗಾ 2009ರಿಂದ ಪೊಲೀಸ್ ಇಲಾಖೆಯಲ್ಲಿದ್ದು, 12 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಒಟ್ಟು 70 ಕೊಲೆ, 35 ದರೋಡೆ ಪ್ರಕರಣಗಳನ್ನು ಭೇದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಈ ಶ್ವಾನದ ಚುರುಕು ಬುದ್ಧಿಗೆ ಪೊಲೀಸ್ ಇಲಾಖೆ ಮಾತ್ರವಲ್ಲದೆ, ಜಿಲ್ಲೆಯ ಜನರು ಸೆಲ್ಯೂಟ್ ಹೇಳಿದ್ದಾರೆ.
ಓದಿ :ಧಾರವಾಡ ಎಸ್ಪಿ ಪಿ.ಕೃಷ್ಣಕಾಂತ ವರ್ಗಾವಣೆ : ಬೆಳಗಾವಿಗೆ ಸಂಜೀವ್ ಪಾಟೀಲ ನೇಮಕ