ದಾವಣಗೆರೆ : ತಾಲೂಕಿನ ತುರ್ಚಘಟ್ಟ ಗ್ರಾಮದ ಕೂಗಳತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಪ್ರಥಮ ದರ್ಜೆ ಸಹಾಯಕಿ ಹಾಗು ಪ್ರಭಾರ ಅಧೀಕ್ಷಕಿಯಾದ ಕೆ. ನಳಿನಿಯವರನ್ನು ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದ ವೇಳೆ ಅವರಿಗೆ ಸಾಕಷ್ಟು ಜನ ನಳಿನಿ ಅವರ ವಿರುದ್ಧ ಆಪಾದನೆಗಳನ್ನು ಮಾಡಿದ್ರು. ಈ ವೇಳೆ ನಿರಾಶ್ರಿತರ ಕೇಂದ್ರದಲ್ಲಿ ಆಹಾರ ತಯಾರಿಸಲು ಸರಿಯಾದ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಅಡುಗೆ ಮಾಡಲು ನೀಡದೆ ಇರುವುದು, ನಿರಾಶ್ರಿತರಿಗೆ ವಿಧ ವಿಧವಾದ ಆಹಾರ ನೀಡದೆ ಒಂದೇ ಬಗೆಯ ಆಹಾರ ನೀಡುತ್ತಿದ್ದದ್ದು ಹಾಗೂ ನಿರಾಶ್ರಿತರ ಕೇಂದ್ರದ ಹಸುಗಳ ಹಾಲನ್ನು ಅಕ್ರಮವಾಗಿ ಹೊರಗೆ ಮಾರಾಟ ಮಾಡುತ್ತಿದ್ದದ್ದು ಕಂಡು ಬಂದಿದೆ.
ನಿರಾಶ್ರಿತರ ಕೇಂದ್ರದಲ್ಲಿ ಬೆಳೆಯುವ ತರಕಾರಿಗಳಿಂದ ಆದಾಯವನ್ನು ಪೂರ್ಣ ಪ್ರಮಾಣದಲ್ಲಿ ಜಮೆ ಮಾಡದೆ ಹಣ ದುರುಪಯೋಗ ಮಾಡಿಕೊಳ್ಳುವ ಮೂಲಕ ಅಕ್ರಮ ಎಸಗಿರುವ ಆರೋಪ ಸಹ ಈ ವೇಳೆ ಕೇಳಿ ಬಂದಿದೆ. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಡಮಾಡದೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿದ್ದಾರೆ.
ಇದನ್ನೂ ಓದಿ: 84ನೇ ವಯಸ್ಸಿನಲ್ಲಿ ಡಿ.ಲಿಟ್ ಪದವಿ ಪಡೆದು ವಿಶಿಷ್ಟ ದಾಖಲೆ ಬರೆದ ಅಮಲಧಾರಿ ಸಿಂಗ್