ದಾವಣಗೆರೆ: ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎನಿಸಿಕೊಂಡಿರುವ ಸೂಳೆಕೆರೆ ಜಾಗ ಒತ್ತುವಾರಿಯಾಗಿದ್ದಕ್ಕೆ ಅದನ್ನು ಸರ್ವೇ ಮಾಡಿಸುವಂತೆ ಸಂಘವೊಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿತ್ತು. ಇದರಿಂದ ವಿಚಲಿತರಾದ ಒತ್ತುವರಿದಾರರು ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರಂತೆ.
ಸುಮಾರು 6500 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯಲ್ಲಿ ಸಾವಿರಾರು ಎಕರೆ ಒತ್ತುವರಿಯಾಗಿತ್ತು. ಇದನ್ನು ಉಳಿಸುವ ಸಲುವಾಗಿ ಖಡ್ಗಾ ಎಂಬ ಯುವಕರ ಸಂಘ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಇವರ ಹೋರಾಟದ ಫಲವಾಗಿ, ಸರ್ಕಾರ ಸರ್ವೇಗೆ ಆದೇಶ ಮಾಡಿದ್ದು, ಹೋರಾಟಗಾರರಿಗೆ ತಾತ್ಕಾಲಿಕ ಜಯ ಸಿಕ್ಕಿತ್ತು. ಆದರೆ, ಸರ್ಕಾರದ ಆದೇಶ ಕೆರೆ ಒತ್ತುವರಿದಾರರಲ್ಲಿ ಆತಂಕ ಮೂಡಿಸಿದ್ದು, ಸಂಘದ ಮುಖಂಡರಿಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಬೆದರಿಕೆ ಕರೆಗಳಿಂದ ಆತಂಕಗೊಂಡ ಸಂಘದ ಕಾರ್ಯಕರ್ತರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಚಿತ್ರದುರ್ಗಕ್ಕೆ ಹೆಚ್ಚಿನ ನೀರು ಆರೋಪ: ಇದರ ಜೊತೆ ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ವರ್ಷಕ್ಕೆ 0.2 ಟಿಎಂಸಿ ನೀರು ಕೊಂಡೊಯ್ಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಇದನ್ನು ಮೀರಿ ಚಿತ್ರದುರ್ಗಕ್ಕೆ ಹೆಚ್ಚಿಗೆ ಪ್ರಮಾಣದಲ್ಲಿ ನೀರನ್ನು ಚಿತ್ರದುರ್ಗಕ್ಕೆ ಕೊಂಡೊಯ್ಯಲಾಗುತ್ತಿದೆ. ಇದೇ ರೀತಿ ನೀರನ್ನು ಕೊಂಡೊಯ್ದರೆ ಮುಂದಿನ ದಿನಗಳಲ್ಲಿ ಚನ್ನಗಿರಿ ತಾಲೂಕಿಗೆ ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ನಿಗದಿಯಂತೆ 0.2 ಟಿಎಂಸಿ ನೀರು ಮಾತ್ರ ಬಿಡಬೇಕು, ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುವುದಾಗಿ ಖಡ್ಗ ಸ್ವಯಂ ಸೇವಕರ ಸಂಘ ಎಚ್ಚರಿಕೆ ನೀಡಿದೆ.