ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಸೂಳೆಕೆರೆ ಏಷ್ಯಾದಲ್ಲೇ 2 ನೇ ದೊಡ್ಡ ಕೆರೆ, ಹಿಂದೆ ಈ ಕೆರೆಗೆ ಸಂಬಂಧಪಟ್ಟ ಸಾವಿರಾರು ಎಕರೆ ಪ್ರದೇಶ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಕೆರೆಯನ್ನ ಉಳಿಸಬೇಕೆಂದು ಖಡ್ಗ ಸಂಘಟನೆ ಹೋರಾಟ ಕೂಡಾ ನಡೆಸುತ್ತಿತ್ತು. ಸದ್ಯ ಕಳೆದ 2 ವರ್ಷಗಳ ಹೋರಾಟಕ್ಕೆ ಮೊದಲ ಜಯ ಸಿಕ್ಕಿದ್ದು, ನೀರಾವರಿ ಇಲಾಖೆ ಕೆರೆ ಅಳತೆಗೆ ಹಣ ಬಿಡುಗಡೆ ಮಾಡಿದೆ ಇದು ನಮಗೆ ಸಿಕ್ಕ ಮೊದಲ ಜಯ ಎನ್ನುತ್ತಿದೆ ಹೋರಾಟ ಸಮಿತಿ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಶಾಂತಿ ಸಾಗರ, ಇದಕ್ಕೆ ಸೂಳೆಕೆರೆ ಎಂದು ಕರೆಯುತ್ತಾರೆ. ಒಟ್ಟು 6000 ಸಾವಿರ ಎಕರೆ ವಿಸ್ತೀರ್ಣ ಹೊಂದ್ದಿದ್ದು, ಅದು ದಾಖಲೆಗೆ ಮಾತ್ರ ಸೀಮಿತವಾಗಿದೆ. ಈ ಕೆರೆಯ ಸಾವಿರಾರು ಎಕೆರೆ ಪ್ರದೇಶ ಒತ್ತುವರಿಯಾಗಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.
ಖಡ್ಗ ಸಂಘಟನೆಯಿಂದ ಸತತ ಹೋರಾಟ
ಚನ್ನಗಿರಿ ತಾಲೂಕು ಯುವಕರ ತಂಡ ಖಡ್ಗ ಎಂಬ ಸಂಘಟನೆ ಕಟ್ಟಿಕೊಂಡು ಕೆರೆ ಉಳಿಸಲು ಹೋರಾಟ ಮಾಡಿತ್ತು. ಮೊದಲು ಕೆರೆ ಸರ್ವೆ ಕೆಲಸ ಆಗಬೇಕೆಂದು ಹೋರಾಟಕ್ಕೆ ಇಳಿದಿತ್ತು. ಕಳೆದ 2 ವರ್ಷಗಳ ಹೋರಾಟಕ್ಕೆ ಇದೀಗ ಮೊದಲ ಜಯ ಸಿಕ್ಕಿದ್ದು, ನೀರಾವರಿ ನಿಗಮದಿಂದ ಕೆರೆ ಅಳತೆ ಮಾಡಿಸಲು 11 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾತಾಡಿದ ಪಂಡೋಮಟ್ಟಿ ಗುರು ಬಸವ ಸ್ವಾಮೀಜಿ, ಸೂಳೆಕೆರೆ ಉಳಿಸಬೇಕೆಂದು ಹೋರಾಟ ಮಾಡಲಾಗಿತ್ತು. ಈ ಹೋರಾಟಕ್ಕೆ ಜಯ ಸಿಕ್ಕಿದೆ ಅಳತೆ ಮಾಡಿಸಲು ಸರ್ಕಾರ ಮುಂದಾಗಿದ್ದು ಹಣ ಕೂಡ ಬಿಡುಗಡೆ ಮಾಡಿದೆ. ಯುಗಾದಿ ವೇಳೆ ನಮಗೆ ಸಿಹಿ ಸುದ್ದಿ ಸಿಕ್ಕಿದ್ದು ನಮ್ಮ ಹೋರಾಟದ ಮೊದಲ ಜಯವಾಗಿದೆ ಎಂದು ತಿಳಿಸಿದರು.
ಕೆರೆ ಉಳಿವಿಗೆ ಯುವಕರ ದಂಡಿನಿಂದ ಶ್ರಮ
ಇನ್ನೂ ಈ ಕೆರೆ ಉಳಿಸಬೇಕೆಂಬ ಹೋರಾಟಕ್ಕೆ ಹಲವು ಮಠಾಧೀಶರು ನಮಗೆ ಕೈ ಜೋಡಿಸಿ ಸಹಕಾರ ನೀಡಿದ್ದರು. ಇದಕ್ಕೆ ಪ್ರತಿಫಲ ಸಿಕ್ಕಿದೆ, ಕೆಲ ಪ್ರಾಮಾಣಿಕ ಅಧಿಕಾರಿಗಳು ನಮಗೆ ಸಹಾಯ ಮಾಡಿದ್ದು ಅಳತೆ ಮಾಡಿಸಲು ಹಣ ಬಿಡುಗಡೆ ಮಾಡಿಸಿದ್ದಾರೆ. ಯಾರೇ ಒತ್ತುವರಿ ಮಾಡಿದ್ದರು, ಕೆರೆ ಜಾಗ ಬಿಡಬೇಕೆಂದು ಖಡ್ಗ ಸಂಸ್ಥೆ ಮುಖಂಡ ರಘು ಹೇಳಿದರು.
ಇನ್ನು ಜೂನ್ ತಿಂಗಳಲ್ಲಿ ಸರ್ವೇ ಕಾರ್ಯ ನಡೆಯುವ ಸಾಧ್ಯತೆ ಇದೆ, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೆರೆ ಇದಾಗಿದ್ದು, ಈ ಕೆರೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗಬೇಕು. ಈ ಕಾರಣ ಕೆರೆ ಅಳತೆ ವೇಳೆ ಎಲ್ಲರೂ ಸ್ಪಂದಿಸಬೇಕೆಂದು ಖಡ್ಗ ಸಂಸ್ಥೆ ಮುಖಂಡರು ಮನವಿ ಮಾಡಿದ್ದಾರೆ.