ದಾವಣಗೆರೆ: ಜಿಲ್ಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಸಾಕಷ್ಟು ಅಪಘಾತಗಳ ಕೇಂದ್ರವಾಗಿತ್ತು. ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 04ರಲ್ಲಿ ಸಾಕಷ್ಟು ಅಪಘಾತಗಳಾಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಆದರೆ ಇದೀಗ ಚತುಷ್ಪಥ ರಸ್ತೆ ಆದಾಗಿನಿಂದ ಅಪಘಾತ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ.
ಬೆಣ್ಣೆನಗರಿ ದಾವಣಗೆರೆಯಲ್ಲಿ 50 ಕಿ.ಮೀಟರ್ನಷ್ಟು ದೂರ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತದೆ. ಇದೇ ಹೆದ್ದಾರಿಯಲ್ಲಿ ಕಳೆದ ಐದಾರು ವರ್ಷಗಳಲ್ಲಿ 300 ಜನ ಅಪಘಾತದಲ್ಲಿ ಅಸುನೀಗಿದ್ದಾರೆ. ಪ್ರಮುಖವಾಗಿ ಬೆಂಗಳೂರು ಮುಂಬೈಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಮುಂಬೈ ರಸ್ತೆ ದಾವಣಗೆರೆ ನಗರದ ಹೊರವಲಯದಿಂದ ಹಾದು ಹೋಗಿದೆ. ದಾವಣಗೆರೆ ತಾಲೂಕಿನ ಲಕ್ಕಮುತ್ತೇನ ಹಳ್ಳಿಯಿಂದ ಆರಂಭವಾಗುವ ಈ ರಾಷ್ಟ್ರೀಯ ಹೆದ್ದಾರಿ ಜಿಲ್ಲೆಯ ಹರಿಹರ ತಾಲೂಕಿನ ಕುಮಾರಪಟ್ಟಣದಲ್ಲಿ ಕೊನೆಗೊಳ್ಳುತ್ತದೆ.
50 ಕಿ.ಮೀ.ವರೆಗೂ ಹೆದ್ದಾರಿ ಅಗಲೀಕರಣವಾಗಿದ್ದು, ಇತ್ತೀಚೆಗೆ ಅಪಘಾತದ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಗ್ರಾಮಸ್ಥರೇ ಮಾಹಿತಿ ನೀಡುತ್ತಾರೆ. ಇದೀಗ ರಸ್ತೆ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು, ಶೀಘ್ರ ಪೂರ್ಣಗೊಂಡರೆ ಸಣ್ಣ-ಪುಟ್ಟ ಅಪಘಾತಗಳನ್ನೂ ತಡೆಯಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ 67 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ