ದಾವಣಗೆರೆ/ತುಮಕೂರು/ಹುಬ್ಬಳ್ಳಿ: ನಗರಗಳ ಜನಸಂಖ್ಯೆಗೆ ಅನುಗುಣವಾಗಿ ಕ್ರೀಡಾಂಗಣಳಿರಬೇಕು. ಕ್ರೀಡೆ-ಕಸರತ್ತಿಗೆ ತೊಡಗಲು ಪೂರಕ ವಾತಾವರಣವೂ ಬೇಕು. ಆದ್ರೆ ಅದೆಷ್ಟೋ ಕಡೆ ಬೆರಳೆಣಿಕೆಯಷ್ಟು ಮಾತ್ರವೇ ಆಟದ ಮೈದಾನಗಳಿವೆ.
ಬೆಣ್ಣೆನಗರಿ ದಾವಣಗೆರೆಯಲ್ಲಿ ಸುಸಜ್ಜಿತವಾದ ಆಟದ ಮೈದಾನಗಳು ಜನಸಾಮಾನ್ಯರ ಬಳಕೆಗೆ ಪೂರಕವಾಗಿವೆ. ಈವರೆಗೆ ಯಾವುದೇ ಕ್ರೀಡಾಂಗಣದ ಮೇಲೆ ಭೂಗಳ್ಳರ ಕಣ್ಣು ಬಿದ್ದಿಲ್ಲ ಅನ್ನೋದು ನೆಮ್ಮದಿಯ ವಿಚಾರ.
ತುಮಕೂರಿನಲ್ಲಿ ಆಟದ ಮೈದಾನಗಳ ಕೊರತೆಯಿದ್ದು, ಈ ಕೊರತೆಯನ್ನು ನೀಗಿಸಲು ಮಹಾನಗರ ಪಾಲಿಕೆ ಗಮನಹರಿಸಿದೆ. ಹುಬ್ಬಳ್ಳಿಯ ಕಥೆಯೂ ಇದ್ರಿಂದ ಹೊರತಲ್ಲ. ಈ ಹಿಂದೆ ಆಟವಾಡಲು ಇದ್ದ ಖಾಲಿ ಜಾಗಗಳನ್ನು ಪ್ರಭಾವಿಗಳು ಕಬಳಿಸಿದ್ದಾರೆ ಎನ್ನುವ ಆರೋಪಗಳಿವೆ. ಇದಲ್ಲದೇ ಜಿಮ್ಕಾನ ಕ್ರೀಡಾಂಗಣವನ್ನು ಪ್ರಭಾವಿಗಳು ಕ್ಲಬ್ ಆಗಿ ಪರಿವರ್ತಿಸಲು ಮುಂದಾಗಿದ್ದು, ಇದನ್ನು ಉಳಿಸಿಕೊಳ್ಳಲು ಗ್ರೌಂಡ್ ಬಚಾವ್ ಹೋರಾಟ ಸಮಿತಿ ನಿರಂತರ ಹೋರಾಟ ನಡೆಸುತ್ತಿದೆ. ಸದ್ಯ ಇರುವ ಕೆಲವೇ ಕೆಲವು ಕ್ರೀಡಾಂಗಣಗಳಲ್ಲಿ ಸೂಕ್ತ ವ್ಯವಸ್ಥೆಯಿಲ್ಲ ಎಂದು ಕ್ರೀಡಾಪಟು ಅಸಮಾಧಾನ ಹೊರಹಾಕಿದ್ದಾರೆ.
ಕ್ರೀಡಾಪಟುಗಳಿಗೆ, ಜನಸಾಮಾನ್ಯರಿಗೆ ಉತ್ತಮ ಆಟದ ಮೈದಾನಗಳಿರಬೇಕು. ಜನಸಂಖ್ಯೆ ಹೆಚ್ಚಾದಂತೆ ಕ್ರೀಡಾಂಗಣಗಳ ಕೊರತೆ ಕಾಡುತ್ತಿದೆ. ಹಾಗಾಗಿ ಸರ್ಕಾರ ಇತ್ತ ಗಮನಹರಿಸಿ, ಜನಸಾಮಾನ್ಯರ ಬೇಡಿಕೆ ಈಡೇರಿಸಬೇಕಿದೆ.