ದಾವಣಗೆರೆ: ಅನ್ನದಾತನ ಬಾಯಿಗೆ ಮಣ್ಣು ಹಾಕುವ ಕೆಲಸ ನಿರಂತರವಾಗಿ ನಡೆದುಕೊಂಡು ಬರ್ತಾನೆ ಇದೆ. ಇದನ್ನು ತಡೆಯಲು ಸಣ್ಣ ಪುಟ್ಟ ಪ್ರಯತ್ನಗಳಾಗುತ್ತಿದ್ದರೂ ಅದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿಲ್ಲ.
ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಬೀಳ್ತಾನೆ ಇದೆ. ಹೇಳಿ ಕೇಳಿ ಇದು ಮುಂಗಾರು ಹಂಗಾಮು ಬೇರೆ. ಹೀಗಾಗಿ ಎಲ್ಲಿ ನೋಡಿದ್ರು ಹಸಿರು ಕಂಗೊಳಿಸುತ್ತಿದೆ. ಆದ್ರೆ ದಾವಣಗೆರೆ ಜಿಲ್ಲೆಯ ಮಟ್ಟಿಗೆ ನಿರೀಕ್ಷಿತ ಮಳೆ ಆಗಿಲ್ಲ. ಬಿತ್ತನೆ ಮಾಡಿದ್ರೆ ಮುಂದೆ ವರುಣದೇವ ಕೈ ಬಿಡಲ್ಲ ಎಂಬ ನಂಬಿಕೆ ರೈತರದ್ದು. ಹೀಗಾಗಿ ಅನ್ನದಾತ ಬಿತ್ತುವ ಕಾರ್ಯದಲ್ಲಿ ತೊಡಗಿದ್ರೂ ಅನೇಕ ತೊಂದರೆಗಳನ್ನು ಅನುಭವಿಸುತ್ತಿರುವುದು ತಪ್ಪಿಲ್ಲ.
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಸರ್ಕಾರ ರೈತರಿಗೆ ಪೂರೈಕೆ ಮಾಡಲು ನೀಡಿದ ಶೇಂಗಾ ಬೀಜವನ್ನು ಕಳ್ಳರು ಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನ ಪತ್ತೆ ಹಚ್ಚಿರೋದು ಕೂಡ ರೈತರೇ. ಹೀಗೆ ಪತ್ತೆ ಹಚ್ಚಿ ಖಾಕಿ ಪಡೆಗೆ ಒಪ್ಪಿಸಿದರೇ ಅವ್ರು ತನಿಖೆ ಮಾಡುವ ನೆಪದಲ್ಲಿ ಕಾಲಹರಣ ಮಾಡುತ್ತಿದ್ದಾರಂತೆ.
ರಾಜ್ಯದಲ್ಲಿ ಜವಾರಿ ಶೇಂಗಾ ಬೆಳೆಗೆ ಜಗಳೂರು ತಾಲೂಕು ಪ್ರಸಿದ್ಧಿ ಪಡೆದಿದೆ. ಇದು ಮಳೆಯಾಶ್ರಿತ ಪ್ರದೇಶ. ವರ್ಷಕ್ಕೆ ಒಂದೇ ಬೆಳೆ. ಹೀಗಾಗಿ ಬೆಳೆದ ಬೆಳೆಗೆ ಶಕ್ತಿ ಜಾಸ್ತಿ. ಹೀಗಾಗಿ ಏನಾದ್ರು ಮಾಡಿ ಶೇಂಗಾ ಬೆಳೆಯಬೇಕು. ಸ್ವಲ್ಪ ಖಾಸು ಬರುತ್ತದೆ ಎಂದು ನಿತ್ಯ ಜಗಳೂರು ಎಪಿಎಂಸಿಯಲ್ಲಿ ರೈತರು ಕ್ಯೂ ನಿಂತು ಬೀಜ ಖರೀದಿಗೆ ಅನ್ನ ನೀರು ಬಿಟ್ಟು ಕಾಯ್ತಾರೆ. ಆದ್ರೆ ಇವರಿಗೆ ಆ ಪತ್ರ ಈ ಪತ್ರ ಅಂತಾ ಅಲ್ಲಿನ ಸಿಬ್ಬಂದಿಗಳು ಸತಾಯಿಸುತ್ತಾರಂತೆ.
ಶೇಂಗಾ ಬೀಜ ಖರೀದಿಗೆ ರೈತ ಬರುತ್ತಿದ್ದಾನೆ. ಹೀಗೆ ಬರುವ ರೈತನಿಗೆ ರಿಯಾಯ್ತಿ ದರದಲ್ಲಿ ಬೀಜ ವಿತರಣೆ ಮಾಡಬೇಕು. ಆದ್ರೆ ಬಿತ್ತನೆ ಬೀಜ ಕಳ್ಳರ ಮೂಲಕ ಸಂತೆಯಲ್ಲಿ ಮಾರಾಟ ಆಗುತ್ತಿವೆ. ಈಗ ಸ್ವತಃ ಜಿಲ್ಲಾಧಿಕಾರಿಗಳೇ ಈ ಪ್ರಕರಣದ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ. ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಬಳಿ ಅಕ್ರಮವಾಗಿ ಬೀಜವನ್ನು ಚಿತ್ರದುರ್ಗ ಜಿಲ್ಲೆಗೆ ಸಾಗಿಸುತ್ತಿದ್ದ ವಾಹನಗಳನ್ನ ರೈತರೇ ದಾಳಿ ನಡೆಸಿ ಹಿಡಿದಿದ್ದಾರೆ. ಇದರಲ್ಲಿ ಪ್ರಭಾವಿ ಬಿತ್ತನೆ ಬೀಜ ವ್ಯಾಪಾರಿಗಳ ಪಾತ್ರ ಇರುವುದು ಖಚಿತವಾಗಿದೆ. ಇವರಿಗೆ ಕೃಷಿ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹ ಹತ್ತಾರು ವಾಹನಗಳು ಈಗಾಗಲೇ ನಡೆದು ಹೋಗಿವೆ. ಅವುಗಳ ಬಗ್ಗೆ ಸಹ ತನಿಖೆ ನಡೆಯಬೇಕಿದೆ. ಆದ್ರೂ ಬಿತ್ತನೇ ವೇಳೆ ಪ್ರತಿ ವರ್ಷ ರೈತರಿಗೆ ದ್ರೋಹ ಮಾಡುವ ಕೆಲಸ ನಡೆಯುತ್ತಲೇ ಇರೋದು ಮಾತ್ರ ದುರಂತವೇ ಸರಿ.