ದಾವಣಗೆರೆ: ಅವರಗೊಳ್ಳದಲ್ಲಿ ನೆಲೆಸಿರುವ ವೀರಭದ್ರೇಶ್ವರ ಈ ಭಾಗದ ಜನರ ಆರಾಧ್ಯ ದೈವ. ಇಲ್ಲಿ ಪವಾಡ ಪುರುಷ ವೀರಭದ್ರೇಶ್ವರ ಜಾತ್ರೆ ಕೂಡ ಅಷ್ಟೇ ವಿಶೇಷ. ಪ್ರತಿವರ್ಷವೂ ಹರಕೆ ತೀರಿಸಲು ಬರುವ ಭಕ್ತರು ಕೈ, ಬಾಯಿ, ಶರೀರದ ಬಹುತೇಕ ಕಡೆ ಅಸ್ತ್ರವನ್ನು ಹಾಕಿಕೊಂಡು ಭಕ್ತಿಯ ಪ್ರದರ್ಶನ ಮಾಡುವುದು ಎಂಥವರ ಮೈಯನ್ನೂ ಜುಮ್ಮೆನಿಸದೆ ಬಿಡುವುದಿಲ್ಲ. ಈ ಕುರಿತ ವಿಶೇಷ ಮಾಹಿತಿ ಇಲ್ಲಿದೆ.
ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವಕ್ಕೆ ಸಾಕಷ್ಟು ಭಕ್ತರು ಸಾಕ್ಷಿಯಾದ್ರು. ಇಲ್ಲಿ ಪ್ರತಿ ವರ್ಷ ಭಾರತ ಹುಣ್ಣಿಮೆ ಬಳಿಕ ಜರುಗುವ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರೆಗೆ ರಾಜ್ಯ, ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ.
ಸ್ಥಳ ವಿಶೇಷ: ಪುರಾಣದ ಪ್ರಕಾರ, ದೇವಾನುದೇವತೆಗಳ ಮೇಲೆ ದಕ್ಷ ಬ್ರಹ್ಮ ದಾಳಿ ನಡೆಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ದೇವರ ಅನುಗ್ರಹದಿಂದ ವೀರಭದ್ರ ಜನ್ಮತಾಳಿ ರಾಕ್ಷಸರ ಉಪಟಳಕ್ಕೆ ಇತಿಶ್ರೀ ಹಾಕುತ್ತಾನೆ. ಇದೇ ಕಾರಣಕ್ಕೆ ವೀರಭದ್ರನ ಪೂಜೆ ಮತ್ತು ಪವಾಡ, ಭಕ್ತಿ ಸಮರ್ಪಣೆಯ ವಿಧಾನಗಳು ಹೆಚ್ಚು ಪ್ರಸಿದ್ಧವಾಗಿ ನಡೆದುಕೊಂಡು ಬಂದಿವೆ. ಈ ಕಾರಣಕ್ಕಾಗಿ ಪ್ರತಿ ವರ್ಷವೂ ಮೆರವಣಿಗೆ ಮಾಡುವ ಭಕ್ತರು ತಮ್ಮ ಹರಕೆಯನ್ನು ತೀರಿಸುವಾಗ ಅಸ್ತ್ರ ಸೇವೆ ಮಾಡುವುದು ನಡೆದುಕೊಂಡು ಬಂದಿದೆ.
ಓದಿ: ಸಂಗಮೇಶ್ ಅಮಾನತು ರದ್ದುಗೊಳಿಸಿ, ಇಲ್ಲದಿದ್ದರೆ ನಮ್ಮೆನ್ನೆಲ್ಲಾ ಅಮಾನತು ಮಾಡಿ : ಸಿದ್ದರಾಮಯ್ಯ ಪಟ್ಟು
ವಿಶೇಷ ಹರಕೆ ಸಲ್ಲಿಕೆ: ಇಲ್ಲಿ ಬೇರೆ ಕಡೆಗಿಂತ ವಿಭಿನ್ನವಾದ ಗುಗ್ಗಳ ನಡೆಯುತ್ತದೆ. ಕೆಲವೆಡೆ ಮಣ್ಣಿನ ಮಡಿಕೆಗಳ ಗುಗ್ಗಳ ಮಾಡಲಾದ್ರೆ, ಇನ್ನು ಕೆಲವೆಡೆ ಆವರಗೊಳ್ಳದಲ್ಲಿ ಮಾತ್ರ ಭತ್ತದ ಹುಲ್ಲಿನ ಶರವೇ ಮೂಲಕ ಗುಗ್ಗಳ ಮಾಡಲಾಗುತ್ತದೆ. ಈ ನಡುವೆ, ಶಸ್ತ್ರ ಎಂಬ ಕಾರ್ಯವನ್ನೂ ನೆರವೇರಿಸಲಾಗುತ್ತದೆ. ದೇವಾಲಯಕ್ಕೆ ಬರುವ ಭಕ್ತರು ಪುರೋಹಿತರಿಂದ ಬಾಯಿಗೆ ತಂತಿ ಹಾಕಿಸಿಕೊಂಡು ತಮ್ಮ ಸಂಕಷ್ಟವನ್ನು ದೂರ ಮಾಡಿಕೊಳ್ಳುತ್ತಾರೆ.