ದಾವಣಗೆರೆ: ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾದ ಹಿನ್ನೆಲೆ, ಜಾಲಿನಗರ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಂಡ ಸರ್ಕಲ್ಲ್ಲಿ ಪ್ರತಿಭಟನೆ ನಡೆಸಿದ ಜನರು, ಈ ಪ್ರದೇಶವನ್ನು ಸೀಲ್ಡೌನ್ ಮಾಡಿದ್ದರಿಂದ ತುಂಬಾ ತೊಂದರೆಯಾಗಿದೆ. ಅಗತ್ಯ ವಸ್ತುಗಳು ಸರಿಯಾಗಿ ಸಿಗುತ್ತಿಲ್ಲ, ಓಡಾಡಲು ಆಗುತ್ತಿಲ್ಲ ಹಾಗೂ ಆಹಾರವೂ ದೊರಕುತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಬಾಷಾ ನಗರ ಹಾಗೂ ಜಾಲಿನಗರದ ನಿವಾಸಿಗಳು ನಮ್ಮನ್ನು ಇದರಿಂದ ಮೊದಲು ಮುಕ್ತಗೊಳಿಸಿ, ಇಲ್ಲದಿದ್ದರೆ ನಮಗೆ ತರಕಾರಿಯಲ್ಲಿ ವಿಷ ಕೊಟ್ಟು ಸಾಯಿಸಿ. ಇಲ್ಲಿ ನಮಗೆ ತಿನ್ನಲು ಆಹಾರವಿಲ್ಲ, ನಮ್ಮ ಕಷ್ಟವನ್ನು ಯಾರು ಕೇಳುತ್ತಿಲ್ಲ ಎಂದು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತಮ್ಮ ಸಿಟ್ಟನ್ನು ಹೊರ ಹಾಕಿದರು. ಈ ವೇಳೆ ಪೊಲೀಸರು ಸಮಾಧಾನ ಪಡಿಸಲು ಯತ್ನಿಸಿದಾಗ, ಸುಮ್ಮನಾಗದ ಜನರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.