ದಾವಣಗೆರೆ: ಜಿಲ್ಲೆಯಲ್ಲಿ ಗಣೇಶೋತ್ಸವ ಈ ಬಾರಿ ವಿಶೇಷ ಮೆರುಗು ಪಡೆಯಲಿದೆ. ಕಳೆದ ಎರಡು ವರ್ಷಗಳಿಂದ ವಿಘ್ನನಿವಾರಕನಿಗೆ ಕೋವಿಡ್ ಅಡೆತಡೆಯಾಗಿತ್ತು. ಸರ್ಕಾರದ ನಿರ್ಬಂಧಗಳು, ನಿಯಮಗಳು ಉತ್ಸವಕ್ಕೆ ಕಂಠಕವಾಗಿದ್ದವು. ಆದ್ರೆ ಈ ವರ್ಷ ಗಣೇಶೋತ್ಸವಕ್ಕೆ ಸಿದ್ಧತೆ ಬಿರುಸುಗೊಂಡಿದೆ.
ಮಣ್ಣಿನ ಮೂರ್ತಿ ತಯಾರಕರ ಕಷ್ಟ-ನಷ್ಟ: ಕಳೆದ ಕೆಲವು ವರ್ಷಗಳಿಂದ ಕೊರೊನಾಗೆ ತತ್ತರಿಸಿ ಹೋಗಿದ್ದ ಗಣೇಶ ಮೂರ್ತಿ ತಯಾರಕರು ಈ ಬಾರಿ ನೂರಾರು ಬಣ್ಣ ಬಣ್ಣದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ಆದ್ರೆ ಪಿಓಪಿ ಗಣೇಶ ಮೂರ್ತಿಗಳಿಂದ ದಾವಣಗೆರೆಯ ಮಣ್ಣಿನ ಗಣೇಶ ಮೂರ್ತಿ ತಯಾರಕರು ಕಂಗೆಟ್ಟಿದ್ದಾರೆ. ಚಿತ್ರಗಾರ್ ಗಲ್ಲಿಯ ನಿವಾಸಿ ವಿಜಯ್ ಕುಮಾರ್ ಅವರು ತಮ್ಮ ಮನೆಯಲ್ಲೇ ನೂರಾರು ಮಣ್ಣಿನ ತರಹೇವಾರಿ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಾರೆ.
ಇವರ ಬಳಿ 500 ರೂ.ನಿಂದ ಹಿಡಿದು ಸಾವಿರಾರು ರೂಪಾಯಿವರೆಗಿನ ಗಣೇಶನ ಮೂರ್ತಿಗಳಿವೆ. ಪಿಓಪಿ ಗಣೇಶ ಮೂರ್ತಿಗಳ ಹಾವಳಿಯಿಂದ ಸಾವಿರಾರು ಮೂರ್ತಿಗಳನ್ನು ಸಿದ್ಧಪಡಿಸುವ ಬದಲು, ಈ ಬಾರಿ ಕೇವಲ 150 ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ಅಲ್ಲದೇ ಬರುವ ಗ್ರಾಹಕರು ಸಹ ಮಣ್ಣಿನ ಮೂರ್ತಿಗಳನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರಂತೆ. ಹಾಗಾಗಿ ಜಿಲ್ಲಾಡಳಿತ ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಬೇಕೆಂದು ವಿಜಯ್ ಕುಮಾರ್ ಒತ್ತಾಯಿಸಿದರು.
ಜನರನ್ನು ಸೆಳೆಯುತ್ತಿವೆ ಮಣ್ಣಿನ ಮೂರ್ತಿಗಳು: ವಿಜಯ್ ಕುಮಾರ್ ಅವರ ಕುಟುಂಬ ಸುಮಾರು 60 ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರು ಮಾಡಿಕೊಂಡು ಬರುತ್ತಿವೆ. ಇಲಿ ಮೇಲೆ ಕೂತಿರುವ ಗಣೇಶ, ಅಂಬೇಡ್ಕರ್ ಗಣೇಶ, ಈಶ್ವರನ ಗಣೇಶ, ಸೋಫ, ಕಮಲದ ಮೇಲೆ ಕೂತಿರುವುದು, ಆನೆ ಮೇಲೆ, ಬಸವಣ್ಣನ ಮೇಲೆ ಕೂತಿರುವ ಹೀಗೆ ವಿವಿಧ ಗಣಪ ಮೂರ್ತಿಗಳನ್ನು ತಯಾರು ಮಾಡಲಾಗಿದೆ. ಬೃಹತ್ ಗಣೇಶ ಮೂರ್ತಿಗಳನ್ನು ಮಹಾರಾಷ್ಟ್ರ, ಕೊಲ್ಲಪುರ್, ಪುಣೆ, ಬಾಂಬೆಯಿಂದ ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ.
ಗಣಪತಿಗೆ ತರಳಬಾಳು ಮಹಾಮಂಟಪ: ಕಳೆದ ಐದು ವರ್ಷಗಳಿಂದ ಆಚರಿಸುತ್ತಿರುವ ಹಿಂದೂ ಮಹಾಗಣಪತಿ ಈ ಬಾರಿ ತುಂಬಾ ಆಕರ್ಷಕವಾಗಿರಲಿದೆ. ಕಳೆದ ಬಾರಿ ಧರ್ಮಸ್ಥಳದ ಮಂಜುನಾಥ ದೇವಾಲಯ ಮಾದರಿಯ ಪೆಂಡಲ್ ನಿರ್ಮಾಣ ಮಾಡಲಾಗಿತ್ತು. ಈ ಬಾರಿ ಹೆಚ್ಚು ಜನರನ್ನು ಆಕರ್ಷಿಸಲು ಸಮಿತಿ ತರಳಬಾಳು ಮಹಾಮಂಟಪವನ್ನು ನಿರ್ಮಾಣ ಮಾಡ್ತಿದ್ದು, ಉದ್ಘಾಟನೆಗೆ ಖುದ್ದು ತರಳಬಾಳು ಶ್ರೀ ಆಗಮಿಸುತ್ತಿದ್ದಾರೆ.
ಜಿಲ್ಲಾಡಳಿತದ ನಿಯಮಗಳೇನು?: ಗಣೇಶೋತ್ಸವ ಆಚರಿಸುವ ಸಂಘ-ಸಂಸ್ಥೆಗಳು ಸರ್ಕಾರದ ಸುತ್ತೋಲೆಯ ಅಂಶಗಳನ್ನು ಪಾಲಿಸುವ ಮೂಲಕ ಹಬ್ಬವನ್ನು ಆಚರಿಸಬೇಕೆಂದು ಜಿಲ್ಲಾಧಿಕಾರಿ ಶಿವಾನಂದ ಕಪಾಸಿ ತಿಳಿಸಿದ್ದಾರೆ. ಸಾರ್ವಜನಿಕr ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಹಿಂದಿನ ವರ್ಷಗಳಲ್ಲಿ ನಡೆದಂತೆ ಪ್ರಸಕ್ತ ವರ್ಷದಲ್ಲಿ ಕೂಡ ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಒಪ್ಪಿಗೆ.. ಆದ್ರೆ
ಪರವಾನಿಗೆ ಪಡೆಯದೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ಇಲ್ಲ. ಆದ್ದರಿಂದ ಆಯೋಜಕರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಫ್ಲೆಕ್ಸ್ ಬಳಕೆಗೆ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೆ ಅಳವಡಿಸಬಾರದು. ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಸಮಿತಿ ಮೇಲೆ ಇರುತ್ತದೆ ಎಂದು ನಾಗರಿಕ ಸೌಹರ್ದ ಸಮನ್ವಯ ಸಭೆಯಲ್ಲಿ ಎಸ್ಪಿ ಸಿ ಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.