ದಾವಣಗೆರೆ: ಕುರಿ ಕದ್ದು ಪರಾರಿಯಾಗುವಾಗ ಟಾಟಾ ಪಿಕಪ್ ವಾಹನದಲ್ಲಿ ಕಳ್ಳರು ಸಿಕ್ಕಿಹಾಕಿಕೊಂಡಿದ್ದು, ಗ್ರಾಮಸ್ಥರು ಕುರಿಗಳ್ಳರಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆ ಬೆನ್ನೂರು ಬಳಿಯ ಚಿಕ್ಕೂಡ ಗ್ರಾಮದಲ್ಲಿ ನಡೆದಿದೆ.
ಚಿಕ್ಕೂಡ ಗ್ರಾಮದಲ್ಲಿ ಟಾಟಾ ಪಿಕಪ್ ವಾಹನದಲ್ಲಿ 40 ಕುರಿಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿರುವಾಗ, ಟಾಟಾ ಪಿಕಪ್ ವಾಹನದ ಚಕ್ರಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿವೆ. ಈ ವೇಳೆ ಗಮನಿಸಿದ ಗ್ರಾಮಸ್ಥರಿಗೆ ಇವರು, ಕುರಿಗಳ್ಳರು ಎಂದು ತಿಳಿದಿದೆ ಎನ್ನಲಾಗಿದೆ.
ರಾತ್ರಿ ವೇಳೆ ಮಾರಕಾಸ್ತ್ರಗಳೊಂದಿಗೆ 8 ಜನರ ತಂಡ ಆಗಮಿಸಿದ್ದು ಅದರಲ್ಲಿ ಇಬ್ಬರು ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಗ್ರಾಮಸ್ಥರು ಕಳ್ಳರಿಗೆ ಸರಿಯಾಗಿ ಗೂಸಾ ನೀಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳ್ಳರನ್ನು ಬಂಧಿಸಲು ಆಗಮಿಸಿದ ಪೊಲೀಸರಿಗೆ ತಡೆ ಹಾಕಿ ಇಲ್ಲೇ ವಿಚಾರಣೆ ನಡೆಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಗ್ರಾಮಸ್ಥರನ್ನು ಮನವೊಲಿಸಿದ ಸಂತೆಬೆನ್ನೂರು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಳ್ಳರನ್ನು ಠಾಣೆಗೆ ಕರೆದೊಯ್ದಿದ್ದಾರೆ.