ದಾವಣಗೆರೆ: ನಗರೋತ್ಥಾನ ಯೋಜನೆಯಡಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಪೊರೇಟರ್ಗಳ ವಾರ್ಡ್ಗಳಿಗೆ ಕಡಿಮೆ ನೀಡಿ ಪಾಲಿಕೆಯ ಬಿಜೆಪಿಯ ಸದಸ್ಯರಿಗೆ ಹೆಚ್ಚು ಹಣ ನೀಡಲು ನಿರ್ಧರಿಸಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಪಾಲಿಕೆಯ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆಯ ವಿಪಕ್ಷ ನಾಯಕ ನಾಗರಾಜ್, ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಶಾಸಕ ಎಸ್. ಎ. ರವೀಂದ್ರನಾಥ್ ಪುತ್ರಿ ಗೆದ್ದಿರುವ ವಾರ್ಡ್ಗೆ 5 ಕೋಟಿ 15 ಲಕ್ಷ ರೂಪಾಯಿ, ಮೇಯರ್ ಜಯಿಸಿರುವ ವಾರ್ಡ್ಗೆ 2 ಕೋಟಿ 60 ಲಕ್ಷ ರೂಪಾಯಿ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಈ ವಾರ್ಡ್ಗಳು ಈಗಾಗಲೇ ಅಭಿವೃದ್ಧಿಯಾಗಿವೆ. ಕಾಂಗ್ರೆಸ್ ಕಾರ್ಪೊರೇಟರ್ಗಳು ಗೆದ್ದಿರುವ ಬಹುತೇಕ ವಾರ್ಡ್ಗಳಲ್ಲಿ ಸ್ಲಂಗಳೇ ಹೆಚ್ಚಾಗಿದ್ದು, ಇಲ್ಲಿಗೆ ತುಂಬಾ ಕಡಿಮೆ ಅನುದಾನ ನೀಡಲಾಗಿದೆ. ಈ ರೀತಿಯ ದ್ವೇಷದ ರಾಜಕಾರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಕಳೆದ ತಿಂಗಳು 9 ರಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅಧ್ಯಕ್ಷತೆಯಲ್ಲಿ ಮೇಯರ್, ಆಯುಕ್ತರು ತರಾತುರಿಯಾಗಿ ಸಭೆ ನಡೆಸಿದ್ದಾರೆ. ಈ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪರ ಗಮನಕ್ಕೆ ತಂದಿಲ್ಲ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಶಿವಶಂಕರಪ್ಪ ಪತ್ರ ಬರೆದಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಕೆ ಮಾಡಿರುವ ವಾರ್ಡ್ಗಳಲ್ಲಿ ತಾರತಮ್ಯವಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಕ್ರಿಯಾ ಯೋಜನೆ ಮಂಜೂರು ಮಾಡದೇ ಮರು ಪರಿಶೀಲಿಸಿ ಮತ್ತೆ ಸಭೆ ನಡೆಸಿ ಚರ್ಚಿಸಿ ಅನುದಾನ ಬಿಡುಗಡೆ ಮಾಡಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.
ಸಚಿವ ಭೈರತಿ ಬಸವರಾಜ್ ಸಂಬಂಧಪಟ್ಟವರಿಗೆ ತಾರತಮ್ಯ ಸರಿಪಡಿಸುವಂತೆ ಸೂಚಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು ಹದಿನೈದು ದಿನಗಳೊಳಗೆ ಈಗ ನಿರ್ಧರಿಸಿ ಕಳುಹಿಸಿರುವ ಕ್ರಿಯಾಯೋಜನೆ ವಾಪಸ್ ಪಡೆಯದಿದ್ದರೆ ಪಾಲಿಕೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.