ದಾವಣಗೆರೆ: ಪರಿಶಿಷ್ಟ ಪಂಗಡಕ್ಕೆ ಅಕ್ಟೋಬರ್ 31ರೊಳಗೆ ಶೇಕಡಾ 7.5 ರಷ್ಟು ಮೀಸಲಾತಿ ಹೆಚ್ಚಿಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಇದಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತ ಪಡೆದು ಗೆದ್ದಿರುವ 15 ಶಾಸಕರು ಹಾಗೂ ಇಬ್ಬರು ಸಂಸದರು ಕೈಜೋಡಿಸಲಿದ್ದಾರೆ ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಶ್ರೀಗಳು, ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿದೆ. ಆದರೆ, ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ಅಕ್ಟೋಬರ್ 21ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು.
ಅ. 6ರಂದು ಬೆಂಗಳೂರಿನ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಸಭೆಯಲ್ಲಿ ಸಮಾಜದ ಶಾಸಕರು ಹಾಗೂ ಸಂಸದರು, ಸ್ವಾಮೀಜಿಗಳು ಹೋರಾಟಕ್ಕಿಳಿದರೆ ಎಲ್ಲಾ ತ್ಯಾಗಕ್ಕೂ ಸಿದ್ಧವೆಂದು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಅವರೂ ಪಾಲ್ಗೊಳ್ಳಲಿದ್ದಾರೆ. ಯಾವುದೇ ಕಾರಣಕ್ಕೂ ಬೇಡಿಕೆ ಈಡೇರದ ಹೊರತು ಹೋರಾಟ ಕೈಬಿಡಲ್ಲ ಎಂದು ಹೇಳಿದರು.
ಶೇಕಡಾ 3 ರಿಂದ 7.5 ಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗ ನೀಡಿರುವ ವರದಿ ಈಗಾಗಲೇ ರಾಜ್ಯ ಸರ್ಕಾರದ ಕೈಸೇರಿದೆ. ಆದ್ರೆ ಸರ್ಕಾರ ವರದಿ ಜಾರಿಗೆ ಮೀನಮೇಷ ಎಣಿಸುತ್ತಿದೆ. ಯಡಿಯೂರಪ್ಪ ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ವೇಳೆ ಮತ ನೀಡಿ ಗೆಲ್ಲಿಸಿದರೆ ಎಲ್ಲಾ ಬೇಡಿಕೆ ಈಡೇರಿಸುತ್ತೇನೆ ಎಂದಿದ್ದರೂ ಇನ್ನೂ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲೇ ವಿಶೇಷ ಸಂಪುಟ ಸಭೆ ಕರೆದು ನಿರ್ಣಯ ಕೈಗೊಳ್ಳಬೇಕು. ಮೀಸಲಾತಿ ಹೆಚ್ಚಿಸಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ಉಗ್ರ ರೂಪ ತಾಳಲಿದೆ ಎಂದು ಸ್ವಾಮೀಜಿ ಎಚ್ಚರಿಕೆ ರವಾನಿಸಿದರು.