ದಾವಣಗೆರೆ: ಹಾವು ಎಂದೊಡನೆ ಭಯ ಸಹಜ. ಎಲ್ಲಿ ಹಾವು ಕಡಿಯುವುದೋ, ಹೆಡೆ ಎತ್ತಿ ನಿಲ್ಲುವುದೋ.. ಹೀಗೆ, ನಾನಾ ರೀತಿಯ ನಕಾರಾತ್ಮಕ ಯೋಚನೆಗಳು ಮನಸ್ಸಿನಲ್ಲಿ ಬರುತ್ತವೆ.
ಆದ್ರೆ ದಾವಣಗೆರೆ ಜಿಲ್ಲೆಯ ಈ ಗ್ರಾಮ ನಾಗರ ಹಾವುಗಳಿಂದು ಕೂಡಿದ್ದು, ಇಲ್ಲಿ ಹರಿದಾಡುವ ಹಾವುಗಳನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾವುದೇ ಭಯವಿಲ್ಲದೆ ಹಿಡಿಯುತ್ತಾರೆ. ಈ ಗ್ರಾಮದಲ್ಲಿ ಯಾರೇ ಹಾವುಗಳನ್ನು ಹಿಡಿದರೂ ಕೂಡ ಇಲ್ಲಿಯವರೆಗೆ ಹಾವುಗಳು ತೊಂದರೆ ಕೊಟ್ಟಿಲ್ಲವಂತೆ. ಅಲ್ಲದೇ ಹಾವು ಕಚ್ಚಿದ್ರೂ ಕೂಡ ಯಾರೂ ಸಾವನ್ನಪ್ಪಿಲ್ಲವಂತೆ.
ಮಕ್ಕಳಿಗೂ ಭಯ ಇಲ್ಲ:
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಾಗೇನಹಳ್ಳಿ ಗ್ರಾಮ ಹಾವುಗಳ ಗ್ರಾಮವೆಂದೇ ಖ್ಯಾತಿ ಪಡೆದಿದೆ. ಈ ಗ್ರಾಮದಲ್ಲಿ ಹೆಚ್ಚು ಹಾವುಗಳು ಓಡಾಡುತ್ತಿದ್ದು ಗ್ರಾಮಸ್ಥರೊಂದಿಗೆ ಬೆರೆಯುತ್ತಿವೆ. ಗ್ರಾಮದಲ್ಲಿರುವ ಈಶ್ವರ ಹಾಗು ಆಂಜನೇಯ ದೇವಾಲಯದ ಬಳಿ ಹೆಚ್ಚಾಗಿ ಕಾಣಸಿಗುವ ಹಾವುಗಳನ್ನು ಗ್ರಾಮದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಹಿಡಿದು ಆಡಿಸುತ್ತಾರೆ.
'ಹಾವಿನಿಂದ ಏನೂ ತೊಂದರೆ ಆಗಿಲ್ಲ'
ಗ್ರಾಮಕ್ಕೆ ಆಗಮಿಸುವ ಹಾವುಗಳು ಜನಸಾಮಾನ್ಯರಂತೆ ಜನರೊಂದಿಗೆ ಬೆರೆಯುತ್ತಾ ಮಕ್ಕಳೊಂದಿಗೆ ಆಟವಾಡುವ ದೃಶ್ಯ ಸಾಮಾನ್ಯವಾಗಿವೆ. ಅನಾದಿ ಕಾಲದಿಂದಲೂ ನಾಗೇನಹಳ್ಳಿ ಗ್ರಾಮಕ್ಕೆ ಹಾಗು ಮನೆಗಳಿಗೆ ಆಗಮಿಸುವ ಹಾವುಗಳನ್ನು ಗ್ರಾಮಸ್ಥರು ಹಿಡಿದು ಆಡಿಸಿದರೂ ಕೂಡ ಯಾರಿಗೂ ಕಚ್ಚಿಲ್ಲವಂತೆ. ಒಂದು ವೇಳೆ ಹಾವು ಕಚ್ಚಿದ್ರೂ ಕೂಡ ಯಾರೂ ಕೂಡ ಸಾವನ್ನಪ್ಪಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ .
'ಆಂಜನೇಯನ ತೀರ್ಥ ಸೇವಿಸಿದರೆ ಹಾವು ಕಚ್ಚಿದ್ದು ವಾಸಿ'
ಅನಾದಿ ಕಾಲದಲ್ಲೂ ಕೂಡ ಈ ಗ್ರಾಮದಲ್ಲಿ ಹಾವುಗಳ ಸಂತತಿ ಹೆಚ್ಚಿದ್ದು, ಆಂಜನೇಯ ಹಾಗು ಈಶ್ವರ ದೇವರ ಪವಾಡದಿಂದ ಹಾವುಗಳು ಆಗಮಿಸುತ್ತಿವೆ ಎಂಬುದು ಪ್ರತೀತಿ. ಈ ಗ್ರಾಮದಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಆಂಜನೇಯ ದೇವಾಲಯದಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡು, ಇಲ್ಲಿನ ತೀರ್ಥ ಸೇವಿಸಿದ್ರೆ ಹಾವು ಕಚ್ಚಿದ್ದು ವಾಸಿಯಾಗುತ್ತೆ ಎಂಬುದು ಗ್ರಾಮಸ್ಥರ ನಂಬಿಕೆ.
ಹಾವು ಸಾವನ್ನಪ್ಪಿದ್ರೆ ಮುಕ್ತಿ ನೀಡ್ತಾರೆ ಗ್ರಾಮಸ್ಥರು:
ಗ್ರಾಮದಲ್ಲಿ ಆಕಸ್ಮಿಕವಾಗಿ ಹಾವು ಸಾವನ್ನಪ್ಪಿದ್ರೆ ಗ್ರಾಮಸ್ಥರು ಮನುಷ್ಯರಿಗೆ ಹೇಗೆ ದಿನಕರ್ಮ ಮಾಡುತ್ತಾರೋ ಹಾಗೆಯೇ ಹಾವುಗಳಿಗೆ ಮುಕ್ತಿ ಕಾಣಿಸುತ್ತಾರೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಕತ್ತಿಗೆ ಸಿಲುಕಿದ ಗಾಳಿಪಟದ ದಾರ: ಮುಂದೇನಾಯ್ತು ನೋಡಿ!