ದಾವಣಗೆರೆ: ಬೆಂಕಿ ಅವಘಡದಲ್ಲಿ ಗುಡಿಸಲು ಕಳೆದುಕೊಂಡ ಕುಟುಂಬಗಳಿಗೆ ಅದೇ ಜಾಗದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಪಾಲಿಕೆ ಹೇಳಿತ್ತು. ಆದರೆ ಒಂದು ವರ್ಷ ಕಳೆದರು ಇನ್ನು ಮನೆಗಳನ್ನು ನಿರ್ಮಿಸಿ ಕೊಡದೆ ಹೇಳಿದ ಮಾತಿನಂತೆ ನಡೆದುಕೊಳ್ಳದೆ ಜನರನ್ನು ಬೀದಿಗೆ ತಳ್ಳಿದೆ ಎಂದು ಜನರು ಆರೋಪಿಸಿದ್ದಾರೆ.
ನಗರದ ಧನವಿನ ಓಣಿ ಬಡಾವಣೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ 37 ದಲಿತ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಗುಡಿಸಲಿಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದ್ದವು. ಅಲ್ಲಿಂದ ಆ ದಲಿತ ಕುಟುಂಬಗಳು ಸೂಕ್ತ ನೆಲ ಇಲ್ಲದೆ ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು.
ಈ ವೇಳೆ ಮಹಾನಗರ ಪಾಲಿಕೆ ಈ ಕುಟುಂಬಗಳಿಗೆ 24.1 ಯೋಜನೆಯಡಿ ನಿವೇಶನ ನೀಡಿ ಮನೆ ಕಟ್ಟಿಕೊಡುವುದಾಗಿ ಹೇಳಿತ್ತು. ಅದರಂತೆ ಸುಮಾರು 50 ಲಕ್ಷ ವೆಚ್ಚದಲ್ಲಿ ಯೋಜನೆ ಸಿದ್ದಗೊಳಿಸಿತ್ತು. ಆದರೆ ಇಂದಿಗೂ ಕೂಡ ನಿವೇಶನಗಳು ಮಾತ್ರ ಬಡ ದಲಿತ ಕುಟುಂಬದ ಕೈ ತಲುಪಿಲ್ಲ. ಇದು ನೊಂದ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ದಲಿತ ಕುಟುಂಬಗಳಿಗಾಗಿ ಮೀಸಲಿಟ್ಟ ಜಾಗವನ್ನು ಖಾಸಗೀಯವರು ಒತ್ತುವರಿ ಮಾಡಿದ್ದು, ಈ ಬಗ್ಗೆ ಪಾಲಿಕೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸದ್ಯ ಖಾಸಗಿ ಜಾಗದ ಮಾಲೀಕರು ತಮ್ಮ ಜಾಗದಲ್ಲಿ ನಿರ್ಮಿಸಿರುವ ಗುಡಿಸಲುಗಳನ್ನು ತೆರವುಗೊಳಸುವಂತೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಈ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ.
ಎಸ್.ಎಸ್.ಮಲ್ಲಿಕಾರ್ಜುನ್ ಸಚಿವರಾಗಿದ್ದಾಗ ಧನವಿನ ಓಣಿಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಿದ್ದರು. ಆದರೆ ಇನ್ನೂ ನಿವೇಶನ ಮಾತ್ರ ಸಿಕ್ಕಿಲ್ಲ. ಬರುವ ಸೋಮವಾರದ ಒಳಗೆ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡದೆ ಇದ್ದಲ್ಲಿ ಪಾಲಿಕೆ ಎದುರು ಅಹೋ ರಾತ್ರಿ ಹೋರಾಟ ಮಾಡುವುದಾಗಿ ಕುಟುಂಬಗಳು ಎಚ್ಚರಿಕೆ ನೀಡಿದ್ದಾರೆ.