ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಸ್ವಪಕ್ಷದಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದಕ್ಕಾಗಿ ಅವರಿಗೆ ಪಕ್ಷದಿಂದ ಶೋಕಾಶ್ ನೋಟಿಸ್ ಕೂಡ ಬಂದಿತ್ತು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸುವ ರೇಣುಕಾಚಾರ್ಯ ಅವರು ಹಿಂದಿನ ಘಟನೆಗಳ ಕುರಿತು ಮಾತನಾಡಿದ್ದಾರೆ. ಅಂದು ಬಿ ಫಾರಂ ಕೊಡದೆ ಇದ್ದಿದ್ದರೆ ಇಂದು ರಾಜ್ಯದ ಜನರಿಗೆ ನಾನು ಯಾರು ಅನ್ನೋದೇ ತಿಳಿದಿರುತ್ತಿರಲಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಇಂದು ಹಿಂದೂ ಯುವಶಕ್ತಿ ಗಣಪತಿ ಹೋಮ ಕಾರ್ಯಕ್ರದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನಾನು ಚಳವಳಿಯಿಂದ ರಾಜಕಾರಣಕ್ಕೆ ಬಂದವನು, ಯಾರೋ ನಿನ್ನೆ ಮೊನ್ನೆ ಬಂದವರು ನನ್ನ ಬಗ್ಗೆ ಮಾತನಾಡಿದರೆ ಮಹತ್ವ ಕೊಡುವುದಿಲ್ಲ. ನನಗೆ ರಾಜಕಾರಣ ಹೊಸದೇನಲ್ಲ, ಸಂಘಟನೆ ಎಂಬುದು ಮನೆಯಲ್ಲಿ ಕುಳಿತು ಮಾಡುವುದಲ್ಲ, ಜನರ ಬಳಿ ಹೋಗುವುದೇ ಸಂಘಟನೆ ಎಂದು ಬಿಎಸ್ವೈ ಹೇಳಿಕೊಟ್ಟಿದ್ದಾರೆ ಎಂದರು.
ಬಕೆಟ್ ಹಿಡಿಯುವ ರಾಜಕಾರಣ ಮಾಡಲ್ಲ: ಬಕೆಟ್ ಹಿಡಿಯುವ ರಾಜಕಾರಣ ಮಾಡಲ್ಲ, ನನ್ನ ಮೇಲೆ ಬೆದರಿಕೆ ಕರೆ ಬಂದಾಗ ಯಾರು ಪ್ರತಿಕ್ರಿಯೆ ನೀಡಲಿಲ್ಲ. ಈಗ ನನ್ನ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಅಂತವರ ಮಾತುಗಳಿಗೆ ಉತ್ತರ ಕೊಡಲ್ಲ, ಕಾಲ ಬಂದಾಗ ಉತ್ತರ ಕೊಡುತ್ತೇನೆ. ನಾನು ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ, ನಾನು ಸ್ಪರ್ಧಿಸಬೇಕು ಎಂದು ಜನರ ಅಪೇಕ್ಷೆ ಇದೆ. ಆದ್ರೆ ಕಾಲಾಯ ತಸ್ಮೈ ನಮಃ.. ಏನಾಗುತ್ತೊ ನೋಡೋಣ ಎಂದು ತಮ್ಮ ಟಿಕೆಟ್ ಇಂಗಿತವನ್ನು ರೇಣುಕಾಚಾರ್ಯ ವ್ಯಕ್ತಪಡಿಸಿದರು.
ನನ್ನನ್ನು ಯಾರು ಕಾಂಗ್ರೆಸ್ಗೆ ಕರೆದಿಲ್ಲ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಸಚಿವ ಮಲ್ಲಿಕಾರ್ಜುನ್ ನನ್ನನ್ನು ಕಾಂಗ್ರೆಸ್ ಗೆ ಕರೆದಿಲ್ಲ, ಈಗಲೂ ನಾನು ಬಿಜೆಪಿ ಕಟ್ಟಾಳು ಎಂದರು. ರೇಣುಕಾಚಾರ್ಯ ಯಾರ ಹಿಡಿತದಲ್ಲೂ ಇಲ್ಲ, ಕಾರ್ಯಕರ್ತರ ಹಿಡಿತದಲ್ಲಿದ್ದೇನೆ. ಕಾಂಗ್ರೆಸ್ಗೆ ಹೋಗುವ ನಿರ್ಧಾರ ಮಾಡಿಲ್ಲ. ಲೋಕಸಭಾ ಕ್ಷೇತ್ರಕ್ಕೆ ಯಾರು ಎಂಬುದರ ಬಗ್ಗೆ ನಿರ್ಧಾರ ಆಗಿಲ್ಲ. ಆದ್ರೇ ಸಂಸದ ಜಿಎಂ ಸಿದ್ದೇಶ್ವರ್ಗೆ ಟಿಕೆಟ್ ಸಿಕ್ಕರೆ ಸಪೋರ್ಟ್ ಮಾಡುವ ಕುರಿತು ನಿರ್ಧಾರ ಮಾಡಿಲ್ಲ ಎಂದರು. ಟಿಕೆಟ್ ಸಿಗದೇ ಇದ್ದರು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಇನ್ನು ಕಾವೇರಿ, ಭದ್ರಾ ಡ್ಯಾಂ ನಮ್ಮ ಹಕ್ಕು, ಸರ್ಕಾರ ಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೊನ್ನಾಳಿ ಮಾಜಿ ಶಾಸಕ ತಿಳಿಸಿದರು.
ಇದನ್ನೂ ಓದಿ: ಪಕ್ಷಕ್ಕೆ ಹಾನಿ ಆದ ಮೇಲೆ ಯಡಿಯೂರಪ್ಪ ಮುಂದಾಳುತ್ವದ ಬಗ್ಗೆ ಮಾತನಾಡುತ್ತಾರೆ : ಮಾಜಿ ಶಾಸಕ ರೇಣುಕಾಚಾರ್ಯ