ದಾವಣಗೆರೆ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಕಾರಣವೇ ಹೊರೆತು ಕೇಂದ್ರ ಸರ್ಕಾರ ಪೆಟ್ರೋಲ್ ದರ ಜಾಸ್ತಿ ಮಾಡಿಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಚ್ಚಾ ತೈಲ ಖರೀದಿ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಬಾಂಡ್‌ಗಳ ಸಾಲವನ್ನು ಬಿಜೆಪಿ ಸರ್ಕಾರ ತೀರಿಸಿದೆ. ಪ್ರತಿ ವರ್ಷ 30,40, 50 ಸಾವಿರ ಕೋಟಿ ಬಾಂಡ್ ಮ್ಯಾಚುರಿಟಿ ಹಣವನ್ನು ಎನ್ಡಿಎ ಸರ್ಕಾರ ಕಟ್ಟಿದೆ. ಕಾಂಗ್ರೆಸ್ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಶೇ.112ರಷ್ಟು ಪೆಟ್ರೋಲ್ ದರ ಏರಿಕೆಯಾಗಿದೆ ಎಂದರು.
2014 ರಿಂದ 2021ರವರೆಗೂ ಬಿಜೆಪಿ ಅವಧಿಯಲ್ಲಿ ಶೇ.28ರಷ್ಟು ಮಾತ್ರ ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ದರ ಜಾಸ್ತಿ ಮಾಡಿಲ್ಲ. ಆಯಾ ರಾಜ್ಯ ಸರ್ಕಾರಗಳ ತೆರಿಗೆಯಿಂದ ತೈಲ ಬೆಲೆ ಏರಿಕೆಯಾಗಿದೆ. ಆಯಾ ರಾಜ್ಯ ಸರ್ಕಾರಗಳು 33-37 ರೂಪಾಯಿ ಜಾಸ್ತಿ ಮಾಡಿವೆ.
ನಾವು ಕೇಂದ್ರದಿಂದ ಪೆಟ್ರೋಲ್ ಕೊಡುತ್ತಿರುವುದು ಕೇವಲ 48-50 ರೂಪಾಯಿಗೆ. ತೈಲ ಬೆಲೆ ಏರಿಕೆಗೆ ಕಾಂಗ್ರೆಸ್ ಸರ್ಕಾರ ಕಾರಣ ಹೊರತು ಬಿಜೆಪಿಯಲ್ಲ ಎಂದು ತೈಲ ಬೆಲೆ ಏರಿಕೆಯನ್ನು ಸಂಸದರು ಮತ್ತೊಮ್ಮೆ ಸಮರ್ಥಿಸಿಕೊಂಡರು.
ಜಿಎಸ್ಟಿಗೂ ನನಗು ಏನ್ ಸಂಬಂಧ?
ಜಿಎಸ್ಟಿಗೂ ನನಗೂ ಏನ್ ಸಂಬಂಧ ಇದೆ. GST ಬಗ್ಗೆ ನಾನು ಸಂಸತ್ತಿನಲ್ಲಿ ಮಾತನಾಡಬಹುದು. ನಾನು ಒಬ್ಬನೇ ಹೋಗಿ ಕೇಳುವ, ಮಾತನಾಡುವ ಅವಶ್ಯಕತೆ ಇಲ್ಲ. ಜಿಎಸ್‌ಟಿ ಸೇರಿದಂತೆ ರಾಜ್ಯದ ಆಗುಹೋಗುಗಳ ಬಗ್ಗೆ ಮಾತನಾಡೊದಕ್ಕೆ ಆರು ಜನ ಸಚಿವರಿದ್ದಾರೆ.
ನಾನು ಜಿಎಸ್‌ಟಿ ಕೊಡುತ್ತಿರುವುದು ಕಡಿಮೆ ಇದೆ, ಜಾಸ್ತಿ ಕೊಡಿ ಎಂದು ಕೇಳಬಹುದು ಅಷ್ಟೇ.. 25 ಸಂಸದರು ಏನ್ ಮಾಡುತ್ತಿದ್ದಾರೆಂದು ಜನ, ಮಾಧ್ಯಮದವರು ಕೇಳುತ್ತಾರೆ, ನಾವು ನಮ್ಮ ಪಾಲನ್ನು ಪಡೆಯಲು 25 ಸಂಸದರು ಕೇಳುತ್ತೇವೆ, ತಂದೆ ತರುತ್ತೇವೆ ಎಂದರು.