ದಾವಣಗೆರೆ: ಬಳ್ಳಾರಿ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾದ ಬಳಿಕ ವೈ.ದೇವೇಂದ್ರಪ್ಪ ಅವರು ಹರಪನಹಳ್ಳಿ ತಾಲೂಕಿನ ಉಚ್ಚೆಂಗಿ ದುರ್ಗಕ್ಕೆ ಭೇಟಿ ನೀಡಿ ಉಚ್ಚೆಂಗೆಮ್ಮ
ದೇವಿಯ ದರ್ಶನ ಪಡೆದರು.
ದೇವೇಂದ್ರಪ್ಪ, ಉಚ್ಚೆಂಗೆಮ್ಮ ಪಾದಗಟ್ಟೆಗೆ ತೆರಳಿ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ಸವಾಂಬ ದೇವಿಯ ಆಡಳಿತ ಮಂಡಳಿಯು ನೂತನ
ಸಂಸದ ದೇವೇಂದ್ರಪ್ಪರನ್ನು ಆತ್ಮೀಯವಾಗಿ ಸನ್ಮಾನಿಸಿತು.
ಈ ವೇಳೆ ದೇವೆಂದ್ರಪ್ಪರೊಂದಿಗೆ ಮಾತುಕತೆ ನಡೆಸಿದ ಆಡಳಿತ ವರ್ಗದವರು, ಉಚ್ಚೆಂಗಿ ದುರ್ಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ, ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಸದ್ಯ ಭಕ್ತರಿಗಾಗಿ ನಿವಾಸ, ಶೌಚಾಲಯ ಮತ್ತು ವಾಹನಗಳಿಗಾಗಿ ಪಾರ್ಕಿಂಗ್ ಅತ್ಯವಶ್ಯಕವಾಗಿದ್ದು, ಈ ಕಾರ್ಯಗಳಿಗೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ.
ಅದರೆ ಕಾಮಗಾರಿ ಕೈಗೆತ್ತಿಕೊಳ್ಳಲು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಂದ್ರಪ್ಪ, ಸಮಸ್ಯೆ ಬಗೆಹರಿಸಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.