ದಾವಣಗೆರೆ: ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವವರ ಮೇಲೆ ನಿಗಾ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವುದನ್ನು ಜಿಲ್ಲಾಡಳಿತ ತಡೆಯೊಡ್ಡಿದೆ. ಈಗಾಗಲೇ ಹಲವರು ಗುಣಮುಖರಾಗಿದ್ದು, ಮತ್ತೆ ಕೆಲವರು ಕೊರೊನಾದಿಂದ ಮುಕ್ತಿ ಹೊಂದಲಿದ್ದಾರೆ. ಈ ಬಗ್ಗೆ ಡಿಸಿ, ಎಸ್ಪಿ, ಆರೋಗ್ಯಾಧಿಕಾರಿಗಳು, ವೈದ್ಯರು ಮಾಹಿತಿ ನೀಡಿದ್ದು, ಇದು ಒಳ್ಳೆಯ ಬೆಳವಣಿಗೆ ಎಂದರು.
ಕಂದಾಯ ಸಚಿವ ಅಶೋಕ್, ಡಿಸಿಎಂ ಲಕ್ಷ್ಮಣ್ ಸವದಿ ನಾಳೆ ದಾವಣಗೆರೆಗೆ ಬರಲಿದ್ದಾರೆ. ನಾನೂ ಇಲ್ಲೇ ತಂಗಲಿದ್ದು, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಭೆ ನಡೆಸಲಿದ್ದೇವೆ. ಇಲ್ಲೇ ಇತ್ಯರ್ಥಪಡಿಸುವ ಪ್ರಯತ್ನ ನಡೆಸುತ್ತೇವೆ ಎಂದರಲ್ಲದೇ, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ತೆರೆಯಲು ಪ್ರಯತ್ನ ನಡೆಸುತ್ತಿದ್ದು, ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಂಡು ಉದ್ಘಾಟನೆ ಮಾಡುತ್ತೇವೆ. ಜೆಜೆಎಂ ಆಸ್ಪತ್ರೆಯಲ್ಲಿ ಲ್ಯಾಬ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಮೂರು ಲ್ಯಾಬ್ ಆರಂಭವಾದ ಬಳಿಕ ದಿನಕ್ಕೆ 300 ಸ್ಯಾಂಪಲ್ಗಳ ಪರೀಕ್ಷೆ ನಡೆಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆಯ ಸಭೆಗೆ ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್ ಕಾರ್ಪೊರೇಟರ್ ವಿರೋಧ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಾಗೇನೂ ಇಲ್ಲ. ತುರ್ತಾಗಿ ತ್ಯಾಜ್ಯ ವಿಲೇವಾರಿಗೆ ವಾಹನಗಳಿಗೆ ಚಾಲನೆ ನೀಡಬೇಕಿತ್ತು. ಹೆಚ್ವು ಮಂದಿ ಬಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗಲ್ಲ ಎಂಬ ಕಾರಣಕ್ಕೆ ಆಹ್ವಾನಿಸಿಲ್ಲ. ಇದನ್ನು ಬಿಟ್ಟರೆ ಬೇರೇನೂ ಇಲ್ಲ ಎಂದು ಭೈರತಿ ಬಸವರಾಜ್ ಸ್ಪಷ್ಟನೆ ನೀಡಿದರು.