ದಾವಣಗೆರೆ : ಅವರಿಬ್ಬರು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹುಡುಗ ಸರಿ ಇಲ್ಲಮ್ಮ ಅವನೊಂದಿಗೆ ಮದುವೆ ಬೇಡಾ ಒಳ್ಳೆ ಕಡೆ ಸಂಬಂಧ ನೋಡಿ ಧಾಮ್ ಧೂಮ್ ಆಗಿ ನಿನಗೆ ಮದುವೆ ಮಾಡ್ತೇವೆ ಎಂದು ಯುವತಿಯ ಪೋಷಕರು ತನ್ನ ಮಗಳ ಬಳಿ ಪರಿಪರಿಯಾಗಿ ಬೇಡಿಕೊಂಡು ಮದುವೆಗೆ ನಿರಾಕರಿಸಿದ್ದರು. ಹಣೆ ಬರಹಕ್ಕೆ ಹೊಣೆ ಯಾರು ಎಂಬಂತೆ ಆ ಯುವತಿ ತನ್ನ ಪ್ರಿಯಕರನನ್ನೇ ವರಿಸಿದ್ದಳು. ಯುವಕನನ್ನು ನಂಬಿ ಪ್ರೀತಿಸಿ ಮದ್ವೆಯಾದ ದುಷ್ಟ ಪತಿ ಹೆಲ್ಮೆಟ್ನಿಂದ ಹೊಡೆದು ಪತ್ನಿಯ ಉಸಿರು ನಿಲ್ಲಿಸಿದ್ದಾರೆ. ಜೊತೆಗೆ ಪತ್ನಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂಬ ಕಥೆ ಕಟ್ಟಿ ಕ್ರಿಮಿನಲ್ ಪ್ಲಾನ್ ಮಾಡಿದ್ದ ಪತಿ ಈಗ ಜೈಲು ಸೇರಿದ್ದಾನೆ.
ಹೌದು, ಇದೇ ತಿಂಗಳು 04 ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನುಗ್ಗಿಹಳ್ಳಿ ಕ್ರಾಸ್ ಬಳಿ ನಡೆಯಬಾರದು ನಡೆದು ಹೋಗಿತ್ತು. ಯುವಕನನ್ನು ನಂಬಿ ಪ್ರೀತಿಸಿ ಕೈ ಹಿಡಿದಿದ್ದ ಯುವತಿಗೆ ಪತಿ ಹೆಲ್ಮೆಟ್ನಿಂದ ಹೊಡೆದು ಉಸಿರು ನಿಲ್ಲಿಸಿದ್ದ. ಮೂರು ತಿಂಗಳ ಗರ್ಭಿಣಿ ಯಶೋಧ (23) ಪತಿಯ ಕೈಯಲ್ಲಿ ಕೊಲೆಯಾದ ಗೃಹಿಣಿ. ಜೊತೆಗೆ ಪತ್ನಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂಬ ಕಥೆ ಕಟ್ಟಿ ಖತರ್ನಾಕ್ ಪ್ಲಾನ್ ಮಾಡಿದ್ದ ಪತಿ ಈಗ ಜೈಲು ಸೇರಿದ್ದಾನೆ. ಇದು ಕೊಲೆ ಎಂದು ದೂರು ನೀಡಿದ್ದ ಮೃತಳ ತಂದೆಯ ದೂರು ಪಡೆದ ಪೊಲೀಸರಿಗೆ ತನಿಖೆ ನಡೆಸಿದ ಬಳಿಕ ಇದು ಕೊಲೆ ಅನ್ನೋದು ತಿಳಿದಿದೆ.
ಕೊಲೆಯಾದ ಯಶೋಧಾ ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ನಿವಾಸಿ. ಆರೋಪಿ ಪತಿ ತಿಪ್ಪೇಶ್ ದಾವಣಗೆರೆ ತಾಲೂಕಿನ ನರಗನಹಳ್ಳಿ ಗ್ರಾಮದ ನಿವಾಸಿ. ಇಬ್ಬರು ಪ್ರೀತಿಸಿ ಆರು ತಿಂಗಳ ಹಿಂದೆ ಪೋಷಕರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪತ್ನಿ ಯಶೋಧ ಜನವರಿ 04 ರಂದು ಪತಿ ತಿಪ್ಪೇಶ್ ಜೊತೆ ತವರಿಗೆ ಬಂದಿದ್ದಳು. ಇದ್ದಕ್ಕಿದ್ದಂತೆ ಗಂಡನ ಮನೆಗೆ ವಾಪಸ್ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಬಳಿಕ ಬೈಕ್ ಅಪಘಾತವಾಗಿ ಯಶೋಧ ಸಾವನ್ನಪ್ಪಿದ್ದಾಳೆ ಎಂದು ಪತಿ ತಿಪ್ಪೇಶ್ ಕಥೆಕಟ್ಟುವ ಮೂಲಕ ಸಂಬಂಧಿಕರಿಗೆ ಮಾಹಿತಿ ನೀಡಿದ್ದ. ಈ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತೆರಳಿದ್ದ ಮೃತ ಯಶೋಧಳ ತಂದೆ ಚಂದ್ರಪ್ಪ ಶವ ನೋಡಿ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದರು.
ತನ್ನ ಪುತ್ರಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ. ಕೊಲೆಯಾಗಿದೆ ಎಂದು ಮೃತ ಯಶೋಧ ತಂದೆ ಚಂದ್ರಪ್ಪ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಚನ್ನಗಿರಿ ಪೊಲೀಸರಿಂದ ಸತ್ಯ ಬಹಿರಂಗವಾಗಿದೆ. ತಾನೇ ಹೆಲ್ಮೆಟ್ ನಿಂದ ಪತ್ನಿಗೆ ಹೊಡೆದು ಸಾಯಿಸಿದ್ದಾಗಿ ತಿಪ್ಪೇಶ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಎಸ್ಪಿ ಉಮಾಪ್ರಶಾಂತ್ ಹೇಳಿದ್ದಿಷ್ಟು: ಈ ವೇಳೆ ಈಟಿವಿ ಭಾರತ್ದೊಂದಿಗೆ ಪ್ರತಿಕ್ರಿಯಿಸಿದ ಎಸ್ಪಿ ಉಮಾ ಪ್ರಶಾಂತ್ ಅವರು, "ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಅಪಘಾತವಾಗಿ ಹೆಂಡತಿ ಸಾವಿಗೀಡಾಗಿದ್ದಾಳೆ ಎಂದು ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಪತಿ ತಿಪ್ಪೇಶ್ ಹೇಳಿದ್ದ. ಮೃತದೇಹ ನೋಡಿದಾಗ ನಮಗೆ ಸಂಶಯಗಳು ಕಂಡುಬಂದವು. ತನಿಖೆ ಮಾಡಿದಾಗ ಅಪಘಾತ ಅಲ್ಲ, ಇದು ಕೊಲೆ ಎಂದು ಸಾಬೀತಾಗಿದ್ದು, ಆರೋಪಿ ತಿಪ್ಪೇಶ್ನನ್ನು ಬಂಧಿಸಲಾಗಿದೆ. ಇವರಿಬ್ಬರು ಪ್ರೀತಿಸಿ ಆರು ತಿಂಗಳ ಹಿಂದೆ ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದರು. ತವರು ಮನೆಗೆ ತೆರಳಿ ಮರಳುವ ವೇಳೆ ಇಬ್ಬರಿಗೆ ಜಗಳವಾಗಿತ್ತು. ಆರೋಪಿ ಹೆಲ್ಮೆಟ್ ಹಾಗೂ ಕೈಯಿಂದ ಕಪಾಳಕ್ಕೆ ಹೊಡೆದಿದ್ದಾನೆ. ತಕ್ಷಣ ಚಿಕಿತ್ಸೆ ಅರಸಿ ಚನ್ನಗಿರಿ ಆಸ್ಪತ್ರೆಗೆ ಕರೆದೊಯ್ದಾಗ ಚಿಕಿತ್ಸೆ ಫಲಕಾರಿಯಾಗದೆ ಯಶೋಧ ಸಾವನ್ನಪ್ಪಿದ್ದಾಳೆ '' ಎಂದು ಮಾಹಿತಿ ನೀಡಿದರು.
ವರದಕ್ಷಿಣೆಗಾಗಿ ಕಿರುಕುಳ ಶುರುಮಾಡಿದ್ದ ತಿಪ್ಪೇಶ್ : ಈ ವೇಳೆ ಮೃತ ಯಶೋಧಾಳ ಸಹೋದರಿ ಮಂಜುಳ ಮಾತನಾಡಿ, "ತಿಪ್ಪೇಶ್ ಮದುವೆ ಆಗ್ತಿನಿ ಎಂದು ಹೆಣ್ಣನ್ನು ಕೇಳಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ನಮಗೆ ಗೊತ್ತಿಲ್ಲದಂತೆ ಯಶೋಧಳನ್ನು ಕರೆದುಕೊಂಡು ಹೋಗಿ ಮದುವೆಯಾಗಿ ನಮಗೆ ಫೋಟೋ ಹಾಕಿದ್ದರು. ಆಗ ಇಬ್ಬರು ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ವರದಕ್ಷಿಣೆಗಾಗಿ ಹೊಡೆದು ಬಡಿದು, ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದ. ಇದಕ್ಕೆ ಸಾಕಷ್ಟು ರಾಜಿ ಪಂಚಾಯ್ತಿ ನಡೆದ್ರು ಗ್ರಾಮಸ್ಥರು ಸರಿಪಡಿಸಿದ್ದರು. ಪಂಚಾಯಿತಿ ಮಾಡಿದಾಗ ತಿಪ್ಪೇಶ್ ವರದಕ್ಷಿಣೆ ಬೇಡಿಕೆ ಇಟ್ಟು, ಯಶೋಧಳನ್ನು ತನ್ನ ಮನೆಗೆ ಕೊಂಡು ಹೋಗಿದ್ದ.
ಬಳಿಕ ಬಹಳ ದಿನಗಳ ನಂತರ ತವರಿಗೆ ಕರೆತಂದು ಮರಳಿ ಮನೆಗೆ ತೆರಳಿದ ಹತ್ತೇ ನಿಮಿಷದಲ್ಲಿ ದೂರವಾಣಿ ಕರೆ ಮಾಡಿ ಈ ರೀತಿಯಾಗಿದೆ ಎಂದು ವಿಷಯ ಮುಟ್ಟಿಸಿದ್ದ. ಐದು ಲಕ್ಷ ತಂದುಕೊಡು ಎಂದು ತಿಪ್ಪೇಶ್ ಹಾಗೂ ಅವರ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಈ ವಿಚಾರವಾಗಿ ಮೃತ ಯಶೋಧ ತನ್ನ ಬಳಿ ಹೇಳಿಕೊಂಡಿದ್ದಳು. ಅಪಘಾತ ಆಗಿದ್ರೆ ಗಾಯಗಳಾಗ್ಬೇಕಿತ್ತು. ಎಲ್ಲೂ ಗಾಯದ ಕಲೆಗಳಿಲ್ಲದ್ದರಿಂದ ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದೇವೆ'' ಎಂದಿದ್ದಾರೆ.
ಇದನ್ನೂ ಓದಿ : ಬೀದರ್: ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಪತಿ ಕೊಲೆ; ಪತ್ನಿ ಸೇರಿ ನಾಲ್ವರು ಅಂದರ್