ದಾವಣಗೆರೆ : ನಾಲ್ಕು ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದ ಲೈನ್ಮ್ಯಾನ್ ವಿದ್ಯುತ್ ಅವಘಡದಲ್ಲಿ ಪ್ರಾಣ ಬಿಟ್ಟ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಹಿನ್ನೆಲೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.
ಅರಬಗಟ್ಟೆ ಗ್ರಾಮದ ಚಿಕ್ಕಸ್ವಾಮಿ ಮೃತ ದುರ್ದೈವಿ. ಅರಬಗಟ್ಟೆ ಗ್ರಾಮದ ನಿವಾಸಿಯಾದ ಹನುಮಂತಪ್ಪ ಹಾಗೂ ಸರೋಜಮ್ಮ ಎಂಬುವರು ಕಡು ಬಡತನದಲ್ಲೇ ಕೂಲಿ ಮಾಡಿ ಪುತ್ರ ಚಿಕ್ಕಸ್ವಾಮಿಯವರಿಗೆ ಶಿಕ್ಷಣ ನೀಡಿ ನೌಕರಿ ಕೊಡಿಸಿದ್ದರು. ಕಳೆದ 22 ತಿಂಗಳ ಹಿಂದೆ ಪವಿತ್ರ ಎಂಬು ಹೆಣ್ಣುಮಗಳ ಜೊತೆ ವಿವಾಹ ಮಾಡಿದ್ದರು.
ಪಾವಗಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕಸ್ವಾಮಿ ಕುಟುಂಬದ ಅಪೇಕ್ಷೆ ಮೇರೆಗೆ ನಾಲ್ಕು ತಿಂಗಳ ಹಿಂದೆ ಹೊನ್ನಾಳಿಗೆ ವರ್ಗಾವಣೆಯಾಗಿದ್ದರು. ಟ್ರಾನ್ಸಫಾರ್ಮರ್ ರಿಪೇರಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸಿ ದುರ್ಮರಣ ಹೊಂದಿದ್ದಾರೆ.
ಲೈನ್ಮ್ಯಾನ್ ಚಿಕ್ಕಸ್ವಾಮಿ ಸಾವಿನಿಂದ ಮನಸ್ಸಿಗೆ ತುಂಬಾ ನೋವಾಯಿತು. ತಮ್ಮ ಜೀವವನ್ನೇ ಒತ್ತೆ ಇಟ್ಟು ಕಾರ್ಯ ನಿರ್ವಹಿಸುವ ಕೆಇಬಿ ನೌಕರರು ಆದಷ್ಟು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ರೇಣುಕಾಚಾರ್ಯ ಅನುಕಂಪದ ಮಾತುಗಳನ್ನ ಆಡಿದರು.
ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ : ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಲು ತೆರಳಿದ್ದ ಶಾಸಕ ರೇಣುಕಾಚಾರ್ಯ ಸ್ಥಳದಲ್ಲೇ ಬೆಸ್ಕಾಂ ಎಂಡಿ ಅವರ ಜೊತೆ ದೂರವಾಣಿಯ ಮೂಲಕ ಮಾತನಾಡಿ, ಸರ್ಕಾರದ ವತಿಯಿಂದ ಕುಟುಂಬ ಸದಸ್ಯರಿಗೆ ನೌಕರಿ ಸೇರಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಜತೆಗೆ ಹೊನ್ನಾಳಿ ಕೆಇಬಿ ಇಲಾಖೆ ವತಿಯಿಂದ ₹5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ವೈಯಕ್ತಿಕವಾಗಿ ₹1ಲಕ್ಷ ನೀಡಿ ಚಿಕ್ಕಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.