ದಾವಣಗೆರೆ: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆ ಜನರು ಹೊರಗೆ ಬಾರದಂತೆ ತಡೆಯಲು ಡಿಸಿ, ಎಸ್ಪಿ ಹಾಗೂ ಪಾಲಿಕೆ ಮೇಯರ್ ಲಾಠಿ ಹಿಡಿದು ನಗರ ಸಂಚಾರ ಮಾಡಿದರು.
ನಗರದ ಭಾರತ್ ಕಾಲೋನಿ, ಶೇಖರಪ್ಪನಗರ ಸೇರಿದಂತೆ ದಾವಣಗೆರೆ ಹಳೇ ಭಾಗದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಹಾನಗರ ಪಾಲಿಕೆಯ ಮೇಯರ್ ಅಜಯ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಹಲವು ಪ್ರದೇಶಗಳಿಗೆ ಭೇಟಿ ನೀಡಿ ಮನೆಯಿಂದ ಹೊರ ಬಾರದಂತೆ ವಾರ್ನಿಂಗ್ ನೀಡಿದರು.
ದಾವಣಗೆರೆ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ನಗರಕ್ಕೆ ಬೇರೆ ಕಡೆಯಿಂದ ಆಗಮಿಸುವವರ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಬೆಳಿಗ್ಗೆ ಹಬ್ಬವಿದ್ದ ಕಾರಣ ಸಡಿಲಿಕೆ ಮಾಡಿದ್ದ ಜಿಲ್ಲಾಡಳಿತ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಾಹನಗಳಲ್ಲಿ ಸಂಚಾರ ಮಾಡುವವರಿಗೆ ಕಾರಣ ಕೇಳಿ ವಿನಾ ಕಾರಣ ಆಗಮಿಸಿದ್ದರೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಮಾತ್ರವಲ್ಲ ಮಾಸ್ಕ್ ಧರಿಸದಿದ್ದರೂ ಒದೆ ಬೀಳುವುದು ಗ್ಯಾರಂಟಿ. ಜನರು ತುರ್ತು ಇದ್ದರೆ ಮಾತ್ರ ಹೊರ ಬರಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ತಿಳಿಸಿದೆ.