ದಾವಣಗೆರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲದಕ್ಕೂ ಟೀಕೆ ಮಾಡಿದರೆ ಏನೂ ಹೇಳಲು ಆಗದು. ಸರ್ಕಾರದ ತಪ್ಪುಗಳಿದ್ದರೆ ಹೇಳಲಿ, ತಿದ್ದಿಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷ ಇರುವುದೇ ಟೀಕೆ ಮಾಡಲು ಎಂದುಕೊಂಡಿದ್ದರೆ ನಾವೇನು ಹೇಳುವುದಕ್ಕಾಗುತ್ತೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಹರಿಹರ ತಾಲೂಕಿನ ಬೆಳ್ಳೂಡಿಯ ಕನಕ ಗುರುಪೀಠದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಆಗಿದ್ದ ಸಿದ್ದರಾಮಯ್ಯರಿಗೆ ಎಲ್ಲವೂ ತಿಳಿದಿದೆ. ಆದರೂ ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಬರಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಹಾಗೂ ದೇವೇಗೌಡರಿಗೆ ಜೊತೆಯಾಗಿ ಭೇಟಿ ನೀಡಿ ಎಂದರೂ ಜನರ ಸಮಸ್ಯೆ ಆಲಿಸಲಿಲ್ಲ. ಆದರೀಗ ಸರ್ಕಾರದ ಬಗ್ಗೆ ವಿನಾಕಾರಣ ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಗ್ರಾಪಂ ಚುನಾವಣೆಗೆ ನಾವು ಸಿದ್ಧ:
ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ನಾವು ತಯಾರಿದ್ದೇವೆ. ಆದ್ರೆ, ಮಹಾಮಾರಿ ಕೊರೊನಾ ಸೋಂಕು ಹರಡುತ್ತಿರುವ ಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಯನ್ನು ಮುಂದೂಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. ಸರ್ಕಾರದ್ದು ಕೂಡ ಇದೇ ನಿಲುವು. ಈ ಹಿನ್ನೆಲೆಯಲ್ಲಿ ವಿಪಕ್ಷ ಜೊತೆ ಸಭೆ ನಡೆಸುವ ಪ್ರಸ್ತಾಪ ಇಲ್ಲ. ಆದ್ರೆ, ಚುನಾವಣಾ ಆಯೋಗ ಹಾಗೂ ಕೋರ್ಟ್ ಚುನಾವಣೆ ನಡೆಸಲೇಬೇಕು ಎಂದರೆ ನಾವು ರೆಡಿ ಇದ್ದೇವೆ. ಎಲ್ಲಾ ಪಕ್ಷಗಳ ನಾಯಕರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಯತ್ನಾಳ್ ಪ್ರಕರಣ ಮುಗಿದ ಅಧ್ಯಾಯ:
ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ ಮುಗಿದ ಅಧ್ಯಾಯ. ಈ ಬಗ್ಗೆ ಈಗಾಗಲೇ ನಾನು ಮಾತನಾಡಿದ್ದು, ಪಕ್ಷದ ರಾಜ್ಯಾಧ್ಯಕ್ಷರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಯತ್ನಾಳ್ ಹೇಳಿಕೆಗೆ ನಾನು ಮತ್ತೆ-ಮತ್ತೆ ಪ್ರತಿಕ್ರಿಯೆ ನೀಡಬೇಕಾ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದರು. ಅಲ್ಲದೇ, ಈ ವಿಷಯವನ್ನು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದೇವೆ. ಪದೇ-ಪದೆ ಇದನ್ನೇ ಕೇಳಬೇಡಿ ಎಂದರು.
ಉಚಿತ ಕೊರೊನಾ ಲಸಿಕೆ ನೀಡುವ ಭರವಸೆಗೆ ಸಮರ್ಥನೆ:
ಬಿಹಾರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕೊರೊನಾ ವ್ಯಾಕ್ಸಿನ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂಬ ಭರವಸೆ ಕೊಟ್ಟಿರುವುದನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ಚುನಾವಣೆ ವೇಳೆ ಪ್ರಣಾಳಿಕೆ ಬಿಡುಗಡೆ ಮಾಡಿ ಭರವಸೆ ನೀಡಲಾಗುತ್ತದೆ. ಯಾವ ಭರವಸೆ ನೀಡಿದರೂ ಹಣ ತೆಗೆದು ಇಡಲಾಗುತ್ತದೆ. ಹಾಗಾಗಿ, ಇದನ್ನೇನೂ ರಾಜಕೀಯಕ್ಕೆ ಬಳಕೆ ಮಾಡಿಕೊಂಡಿಲ್ಲ. ಭರವಸೆ ಕೊಟ್ಟಿದ್ದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಗೆಲುವು ಖಚಿತ:
ಶಿರಾ ಹಾಗೂ ಆರ್ಆರ್ ನಗರ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ. ಲೋಕಸಭೆ, ವಿಧಾನಸಭೆ ಹಾಗೂ ಉಪಚುನಾವಣೆ ನಡೆದಾಗ ಕಾಂಗ್ರೆಸ್ ನಾಯಕರು ರಾಜ್ಯ ರಾಜಕಾರಣದ ದಿಕ್ಸೂಚಿ ಅಂದಿದ್ದರು. ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ ಅಂದಿದ್ದರು. ಕೊನೆಗೆ ಏನಾಯ್ತು? ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದಾಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಬಳಿಕ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.