ದಾವಣಗೆರೆ: ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಜೀ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದು ನಿಜ. ಆದರೆ ನಾವು ಆರ್ಎಸ್ಎಸ್ ಮುಖಂಡ ಸಂತೋಷ್ ಅವರನ್ನು ಭೇಟಿ ಮಾಡಿಲ್ಲ ಎಂದು ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ ನೀಡುವ ಮೂಲಕ ಕುರುಬ ಎಸ್ಟಿ ಮೀಸಲಾತಿ ಹಿಂದೆ ಆರ್ಎಸ್ಎಸ್ ಕೈವಾಡ ಇದೆ ಎಂಬ ಗೊಂದಲಕ್ಕೆ ತೆರೆ ಎಳೆದರು.
ನಗರದಲ್ಲಿ ನಡೆದ ಎಸ್ಟಿ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ನಾವು ಪ್ರಹ್ಲಾದ್ ಜೋಶಿಯವರನ್ನು ಮೀಸಲಾತಿ ವಿಚಾರವಾಗಿ ಭೇಟಿ ಮಾಡಿದ್ದೆವು. ಅವರು ನಮಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಮೀಸಲಾತಿ ಹಿಂದೆ ಯಾರ ಕೈವಾಡವೂ ಇಲ್ಲ. ಈ ಮೀಸಲಾತಿ ವಿಚಾರವಾಗಿ ಮೊಟ್ಟ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಮನೆ ಬಾಗಿಲನ್ನು ತಟ್ಟಿದ್ದು, ಅವರೊಂದಿಗೆ ಸಮಗ್ರವಾಗಿ ಚರ್ಚಿಸಿ ಒಮ್ಮತ ಪಡೆದು ಬಳಿಕ ಸಚಿವ ಕೆ.ಎಸ್.ಈಶ್ವರಪ್ಪನವರನ್ನು ಭೇಟಿ ಮಾಡಿದ್ದೇವೆ ಎಂದರು.
ಓದಿ : ಕುರುಬರ ಎಸ್ಟಿ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ: ನಿರಂಜನಾನಂದಪುರಿ ಶ್ರೀ ಭಾಗಿ
ಸಿದ್ದರಾಮಯ್ಯನವರು, ಸ್ವಾಮೀಜಿ ನೀವು ಹೋರಾಟ ಮಾಡಿ. ನನ್ನ ಯಾವುದೇ ವಿರೋಧ ಇಲ್ಲ ಎಂದು ಒಮ್ಮತ ಸೂಚಿಸಿದ್ದರು. ಆದರೆ ಅವರನ್ನು ಕರೆದಿಲ್ಲ ಎಂಬುದು ಸತ್ಯಕ್ಕೆ ದೂರವಾಗಿದೆ. ಅವರು ನಮ್ಮ ಸಮಾಜದ ನಾಯಕರು. ಇಂತಹ ನೂರು ಸಂಘಟನೆಗಳು ಹುಟ್ಟಿಕೊಂಡರೂ ಕೂಡ ಅವರ ಘನತೆಯನ್ನು ಕೆಡಿಸಲಿಕ್ಕೆ ಆಗಲ್ಲ. ಅವರು ಯಾವಾಗ ಹೋರಾಟಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು.