ದಾವಣಗೆರೆ: ಬಿಜೆಪಿಗೆ ಮತ ಹಾಕುವ ಮುಸಲ್ಮಾನರು ನಿಜವಾದ ರಾಷ್ಟ್ರಭಕ್ತರು. ಇದನ್ನು ನಾನು ಹತ್ತು ಬಾರಿ ಹೇಳಬಲ್ಲೆ. ಇಲ್ಲಿ ಅನ್ನ ತಿಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಅನ್ನೋರು ಅಲ್ಲಿಗೆ ಹೋಗಲಿ. ಯಾರಿಗೆ ಬೇಕಾದರೂ ಮತ ನೀಡಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ನಗರದ ಶಾರದಾ ಸಭಾಂಗಣದಲ್ಲಿ ಏರ್ಪಡಿಸಿದ್ದ 370 ಪರಿಚ್ಛೇದ ರದ್ದು ಕುರಿತ ವಿಚಾರ ಸಂಕೀರ್ಣ ಉದ್ಘಾಟಿಸಿ ಅವರು ಮಾತನಾಡಿದ್ರು.
ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನಿಜವಾದ ರಾಷ್ಟ್ರಭಕ್ತರು ಬಿಜೆಪಿಗೆ ಮತ ಹಾಕಿದ್ದಾರೆ. ತ್ರಿವಳಿ ತಲಾಖ್ ಕಾನೂನು ಜಾರಿಗೊಳಿಸಿದ ಬಳಿಕ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಿಧಾನಸಭೆಯ 5 ಚುನಾವಣೆಯಲ್ಲಿ 31 ಮುಸ್ಲಿಂ ಬೂತ್‌ಗಳಲ್ಲಿ ಬಿಜೆಪಿಗೆ ಒಂದು ಮತ ಬಂದಿರಲಿಲ್ಲ. ಆದ್ರೆ, ಈ ಬಾರಿ ಮುಸಲ್ಮಾನರು ಬಿಜೆಪಿಗೆ ವೋಟ್ ಕೊಟ್ಟಿದ್ದಾರೆ. ನಾನು ಯಾವತ್ತೂ ಕೂಡಾ ನನಗೆ ಮತ ಹಾಕಿ ಎಂದು ಮುಸಲ್ಮಾನರನ್ನು ಕೇಳಿಲ್ಲ, ನಮಸ್ಕಾರವನ್ನೂ ಮಾಡಿಲ್ಲ. ನಾನೇನೂ ಮುಸ್ಲೀಮರ ವಿರೋಧಿ ಅಲ್ಲ. ಇಲ್ಲಿ ಅನ್ನ ತಿಂದು ಪಾಕಿಸ್ತಾನ ಬೆಂಬಲಿಸುವುದನ್ನು ಭಾರತೀಯರು ಸಹಿಸುವುದಿಲ್ಲ ಎಂದರು.
'ಹನಿಮೂನ್ ಗೆ ಪ್ರಧಾನಿ ಮೋದಿ ವಿದೇಶಕ್ಕೆ ಹೋಗಿಲ್ಲ'
ವಿದೇಶ ಪ್ರವಾಸ ಮಾಡುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಯಾವಾಗಲೂ ಟೀಕೆ ಮಾಡುತ್ತಿರುತ್ತಾರೆ. ಮೋದಿ ಅವರೇನೂ ಹನಿಮೂನ್‌ಗೆ ಹೋಗಿಲ್ಲ. ಪ್ರಪಂಚದಾದ್ಯಂತ ಭಾರತ ದೇಶದ ಸಂಸ್ಕೃತಿ, ವಿಚಾರ, ಆಚಾರ ತಿಳಿಸಲು ಹೋಗಿದ್ದಾರೆ. ಇದರ ಪರಿಣಾಮವೇ ಈಗ ಪಾಕಿಸ್ತಾನ ಒಂಟಿಯಾಗಿದೆ. ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಪ್ರಶಂಸಿದರು.