ಹರಿಹರ: ಶಾಲಾ- ಕಾಲೇಜು ಹಂತದಲ್ಲಿ ಜಾನಪದ ಕಲೆ ಬೆಳೆಸಿದಾಗ ಮಾತ್ರ ಅದರ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ 'ಜಾನಪದ ಜಾತ್ರೆ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಜಾನಪದ ಕಲೆ ನಶಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಇದನ್ನು ಉಳಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾವುಗಳು ಜಾನಪದ ಕಲೆಯನ್ನು ಉಳಿಸಲು ಕೈಜೋಡಿಸಬೇಕು ಎಂದರು.
ತಾಲೂಕು ಪಂಚಾಯತಿ ಮಾಜಿ ಸದಸ್ಯ ಎಚ್.ಎಚ್. ಬಸವರಾಜ್ ಬೆಳ್ಳೂಡಿ ಮಾತನಾಡಿ, ಗ್ರಾಮೀಣ ಭಾಗದ ಸೊಗಡನ್ನು ಜಾನಪದ ಕಲೆಯ ಮೂಲಕ ಪರಿಚಯಸುವ ಕೆಲಸವನ್ನು ಯುವಪೀಳಿಗೆಯವರು ಮಾಡುತ್ತಿದ್ದಾರೆ. ಈ ಅನುಕರಣೆಯು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಪಾಠವಾಗಬೇಕು. ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದು ಕ್ರೀಡೆ, ಕೃಷಿ, ಶಿಕ್ಷಣ, ಆಧ್ಯಾತ್ಮ ಹಾಗೂ ಸಾಮಾಜಿಕ ಅಂಶಗಳನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿ ಮಾತನಾಡಿ, ನಾನು ಇದುವರೆಗೂ 2,500 ಮರಗಳನ್ನು ಬೆಳೆಸಿದ್ದೇನೆ. ನಾನು ತಾಲೂಕಿನಲ್ಲಿ ವನಮಹೋತ್ವವ ಕಾರ್ಯಕ್ರಮವನ್ನು ಶೀಘ್ರದಲ್ಲಿ ನಡೆಸುತ್ತೇನೆ. ನಮ್ಮ ಕಾಲದಲ್ಲಿ ಜಾನಪದವು ಮನೆ- ಮನೆಯಲ್ಲಿ ಹುಟ್ಟುತ್ತಿತ್ತು. ಆದರೆ, ಇಂದು ಜಾನಪದ ನಶಿಸುತ್ತಿದೆ. ಯಾವುದೇ ಸಭೆ- ಸಮಾರಂಭಗಳು ನಡೆದರೂ ಉಡುಗೊರೆಯಾಗಿ ಸಸಿಗಳನ್ನು ನೀಡಿ. ಇದರಿಂದ ಪರಿಸರ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಳ್ಳೂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ.ಆರ್ ಮರಳುಸಿದ್ದಪ್ಪ, ತಾ.ಪಂ ಅಧ್ಯಕ್ಷೆ ಶ್ರೀದೇವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಡೊಂಕಪ್ಪ, ರವಿಚಂದ್ರ ಹಾಗೂ ಮತ್ತಿತರರು ಹಾಜರಿದ್ದರು.