ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಾಗುತ್ತಿದೆ. ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿಯೂ ಕೂಡ ಕೊರೊನಾ ಆರ್ಭಟಿಸುತ್ತಿದ್ದು, ಇಲ್ಲಿ ಕೂಡ ಬೆಡ್ ಹಾಗೂ ಆಕ್ಸಿಜನ್ ಅಭಾವ ಉಂಟಾಗುತ್ತಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜೈನ ಸಮುದಾಯದ ವತಿಯಿಂದ ಕೋವಿಡ್ ಕೇರ್ ಸೆಂಟರ್ ತೆರೆದಿದ್ದು, ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ.
ಕೊರೊನಾ ಹೆಚ್ಚಾಗುತ್ತಿದಂತೆ ತಮ್ಮ ಸಮುದಾಯದ ಜನರ ರಕ್ಷಣೆಗಾಗಿ ಜೈನ ಸಮುದಾಯ ಟೊಂಕ ಕಟ್ಟಿ ನಿಂತಿದೆ. ದಾವಣಗೆರೆ ನಗರದ ಆವರಗೆರೆ ರಸ್ತೆಯಲ್ಲಿರುವ ಜೈನ ನಾಗೇಶ್ವರ ಮಂದಿರದಲ್ಲಿ ಸಮುದಾಯದವರಿಗೆ ಕೋವಿಡ್ ಕೇರ್ ಸೆಂಟರ್ ತೆರೆದಿದೆ. ಸುಮಾರು 65ಕ್ಕೂ ಹೆಚ್ಚು ಬೆಡ್, ಆಕ್ಸಿಮೀಟರ್, ಆಕ್ಸಿಜನ್, ವೈದ್ಯರು ಹಾಗೂ ನುರಿತ ವೈದ್ಯರು ಸೇರಿದ್ದಂತೆ ನರ್ಸ್ಗಳನ್ನು ನೇಮಿಸಲಾಗಿದೆ. ಊಟದ ವ್ಯವಸ್ಥೆ ಕೂಡ ಉತ್ತಮ ರೀತಿಯಲ್ಲಿ ಮಾಡಲಾಗಿದೆ.
ಕಳೆದ ಬಾರಿ ಕೊರೊನಾ ಹೆಚ್ಚಾದಾಗ 100 ಬೆಡ್ಗಳ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಕೋವಿಡ್ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗಿದ್ದರು. ಪ್ರತಿಯೊಂದು ಸಮುದಾಯದವರು ಇದೇ ರೀತಿಯಾಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿದರೆ ಆಸ್ಪತ್ರೆಗಳನ್ನು ಸುತ್ತುವ ಹಾಗೆ ಸರ್ಕಾರವನ್ನು ಅವಲಂಬಿಸುವ ಅವಶ್ಯಕತೆ ಇಲ್ಲ ಎಂದು ಮೇಯರ್ ಎಸ್.ಟಿ.ವೀರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ಕೋವಿಡ್ ಕೇರ್ ಸೆಂಟರ್ಗೆ ಬರುವವರಿಗೆ ಎಲ್ಲಾ ರೀತಿಯ ನೆರವು ನೀಡಲು ಜೈನ ಸಮುದಾಯದ ಕಮಿಟಿ ಸಿದ್ಧವಾಗಿದ್ದು, ನಾಳೆಯಿಂದ ಈ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ ಮಾಡಲಿದೆ.