ಹರಿಹರ( ದಾವಣಗೆರೆ): ಲಾಕ್ಡೌನ್ನಿಂದ ಬಡವರು, ನಿರ್ಗತಿಕರು, ಕೂಲಿಕಾರ್ಮಿಕರು ಕೆಲಸವಿಲ್ಲದೇ ಕುಟುಂಬ ನಿರ್ವಹಣೆಗಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಕೈಲಾದಷ್ಟು ಸಹಾಯ ಮಾಡುವುದರ ಮೂಲಕ ಬಡವರಲ್ಲಿ ಧೈರ್ಯ ತುಂಬಬೇಕು ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಕೊಳಚೆ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನ ಬಡವರಿಗಾಗಿ 15 ರಿಂದ 20 ಸಾವಿರ ವಿವಿಧ ಧಾನ್ಯಗಳ ದಿನಸಿ ಕಿಟ್‌ಗಳನ್ನು ಸಿದ್ದಪಡಿಸಿದ್ದು, ಮನೆ ಮನೆಗೆ ತೆರಳಿ ಧಾನ್ಯಗಳನ್ನು ವಿತರಿಸಿದರು.
ಬಡವರಿಗಾಗಿ ಸರ್ಕಾರವು ನೀಡುತ್ತಿರುವ ಪಡಿತರ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಅಗತ್ಯವಸ್ತುಗಳಾದ ಜೋಳ, ಖಾರದ ಪುಡಿ, ಎಣ್ಣೆ, ಬೇಳೆ, ಉಪ್ಪು, ಸಕ್ಕರೆ ಸೇರಿದಂತೆ ವಿವಿಧ ಪದಾರ್ಥಗಳ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ವಿತರಿಸಿದ ನಂತರ ಗ್ರಾಮಾಂತರ ಪ್ರದೇಶದ ಬಡವರಿಗೂ ಕಿಟ್ ವಿತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.