ದಾವಣಗೆರೆ: ಜಿಲ್ಲೆಯ ಚನ್ನಗಿರಿಯಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ, ತಾಲೂಕಿನ ಪ್ರತಿಯೊಂದು ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ಚನ್ನಗಿರಿ ತಾಲೂಕಿನ ಬನ್ನಿಹಟ್ಟಿ, ಬುಳು ಸಾಗರ, ನಲ್ಲೂರು, ವಡ್ನಾಳು, ಗರಗ, ಎರೇಹಳ್ಳಿ, ಹೆಬ್ಳಿಗೆರೆ ಗ್ರಾಮಗಳಲ್ಲಿರುವ ಕೆರೆಗಳು ಮಳೆಯಿಂದ ನಲುಗಿ ಹೋಗಿವೆ. ಸತತವಾಗಿ ಮಳೆ ಬಿದ್ದಿದ್ದು ಕೆರೆಗಳು ಕೋಡಿ ಬಿದ್ದು, ಏರಿ ಒಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಕೆರೆಗಳತ್ತ ಗಮನಹರಿಸುತ್ತಿದ್ದಾರೆ.
ಕೆರೆಗಳು ತುಂಬಿರುವುದರಿಂದ ಕೆಲ ರೈತರು ಸಂತಸಗೊಂಡಿದ್ದರೆ, ಇನ್ನು ಕೆಲವರು ಆತಂಕಕ್ಕೊಳಗಾಗಿದ್ದಾರೆ. ಕೆರೆಗಳು ತುಂಬಿ ಕೋಡಿ ಒಡೆದಿದ್ದು ಸಾಲ ಮಾಡಿ ಬೆಳೆದಿದ್ದ ಭತ್ತ, ಮೆಕ್ಕೆಜೋಳ, ಅಡಿಕೆ, ತೆಂಗು, ಮೆಣಸಿಗೆ ಹಾನಿಯಾಗಿದೆ. ಮಾವಿನ ಹಳ್ಳ, ಹರಿದ್ರಾವತಿ ಹಳ್ಳ ತುಂಬಿ ಹರಿದು ರಸ್ತೆ, ಮನೆಗಳಿಗೆ ನೀರು ನುಗ್ಗಿದೆ.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಮಾತನಾಡಿ, 'ಚನ್ನಗಿರಿ ತಾಲೂಕಿನ ಎಲ್ಲ ಕೆರೆಗಳು ತುಂಬಿದ್ದು, ಕೋಡಿ ಬಿದ್ದಿವೆ. ಕಳೆದ ಜೂನ್ ತಿಂಗಳಲ್ಲಿ ಉಬ್ರಾಣಿ ಏತನೀರಾವರಿ ನೀರನ್ನು ಕೆರೆಗಳಿಗೆ ತುಂಬಿಸಲಾಗಿತ್ತು. ಈಗ ಸುರಿದ ಮಳೆಗೆ ನೀರು ಹೆಚ್ಚಾಗಿ ಕೋಡಿಯ ಮೂಲಕ ಹೊರಗೆ ಹೋಗುತ್ತಿದೆ. ಹಾಗಾಗಿ, ಸಾಕಷ್ಟು ಬೆಳೆ ಹಾನಿಯಾಗಿದೆ. ಈಗಾಗಲೇ ವಡ್ನಾಳು ಕೆರೆ ಸೇರಿದಂತೆ ಸಾಕಷ್ಟು ಕೆರೆಗಳು ಕೋಡಿ ಬಿದ್ದಿದ್ದು, ಅವುಗಳನ್ನು ಆದಷ್ಟು ಬೇಗ ದುರಸ್ತಿ ಮಾಡಿಸುತ್ತೇವೆ' ಎಂದರು.
ಗರಗದಲ್ಲಿ ಕೆರೆ ಕೋಡಿ ಬಿದ್ದು ಅಲ್ಲಿನ ಸುಮಾರು 18ರಿಂದ 20 ಮನೆಗಳಿಗೆ ನೀರು ನುಗ್ಗಿತ್ತು. ಆ ಜನರಿಗೆ ಶಾಲೆಯಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿದ್ದು, ಅಲ್ಲಿ ಗಂಜಿ ಕೇಂದ್ರ ಪ್ರಾರಂಭ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಭಾರೀ ಮಳೆಗೆ ಅಕ್ಷರಶಃ ಮುಳುಗಿದ ಬೆಂಗಳೂರು : ಮನೆಗಳಿಗೆ ನುಗ್ಗಿದ ನೀರು