ದಾವಣಗೆರೆ: ನಿನ್ನೆ ರಾತ್ರಿ ಸುರಿದ ಮಳೆಗೆ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕೇವಲ ಹತ್ತು ನಿಮಿಷ ಬೀಸಿದ ಮಳೆಗೆ ಗ್ರಾಮದ ಜನರು ತತ್ತರಿಸಿ ಹೋಗಿದ್ದಾರೆ.
ಸುರಹೊನ್ನೆಯಲ್ಲಿ 27 ಮನೆಗಳು, ಗ್ರಾಮದ ಸುತ್ತ 16 ನರ್ಸರಿಗೆ ಹಾನಿಯಾಗಿದೆ. ಜೊತೆಗೆ ನ್ಯಾಮತಿ ಕಾಲೇಜು ಹಿಂಭಾಗ ಹಾಗೂ ಕುಂದುರೆಕೊಂಡ ಗ್ರಾಮದಲ್ಲಿಯೂ ಮನೆಗಳ ಶೀಟುಗಳು, ಹಂಚುಗಳು ಗಾಳಿಗೆ ಹಾರಿಹೋಗಿವೆ. ಮನೆಯೊಳಗಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ನೂರಾರು ಮರಗಳು ಧರೆಗುರುಳಿವೆ. ಇನ್ನೂ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾತ್ರಿ ಪೂರ್ತಿ ಜನರು ಕತ್ತಲಿನಲ್ಲಿಯೇ ಕಾಲ ಕಳೆದಿದ್ದಾರೆ.
ಹಾನಿಗೀಡಾದ ಸುರಹೊನ್ನೆ ಗ್ರಾಮಕ್ಕೆ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲಿಸಿ ಸಂಕಷ್ಟಕ್ಕೊಳಗಾದವರಿಗೆ ಸೂಕ್ತ ವ್ಯವಸ್ಥೆ ಹಾಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ವಿದ್ಯುತ್ ಕಂಬಗಳು ಬಿದ್ದ ಹಿನ್ನೆಲೆಯಲ್ಲಿ ಕೂಡಲೇ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿದ್ಯುತ್ ಕಂಬಗಳನ್ನು ಸರಿಪಡಿಸುವಂತೆ ಹಾಗೂ ಮರಗಳು ರಸ್ತೆಗಳಿಗೆ ಅಡ್ಡಲಾಗಿ ಬಿದ್ದಿದ್ದು, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು. ಅಡಿಕೆ ಹಾಗೂ ತೆಂಗಿನ ತೋಟಗಳಿಗೆ ಭಾರೀ ಹಾನಿಯಾಗಿದ್ದು, ಆಲಿಕಲ್ಲು ಮಳೆಯಿಂದಾಗಿ ಭತ್ತ ನೆಲಕಚ್ಚಿದೆ. ಇವೆಲ್ಲವನ್ನೂ ಪರಿಶೀಲನೆ ಮಾಡಿ ರೈತರಿಗೆ ರೇಣುಕಾಚಾರ್ಯ ಧೈರ್ಯ ತುಂಬುವ ಕೆಲಸ ಮಾಡಿದರು.