ದಾವಣಗೆರೆ: ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಬೆಳೆ ಸಮೀಕ್ಷೆ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸಚಿವರು ಆಗಮಿಸುತ್ತಿದ್ದಂತೆ ಸಾಮಾಜಿಕ ಅಂತರ ಮಾಯವಾಗಿದ್ದು ಕಂಡು ಬಂತು.
![Green Signal To Crop Survey Festival](https://etvbharatimages.akamaized.net/etvbharat/prod-images/kn-dvg-03-18-no-distance-script-7203307_18082020140110_1808f_01103_1058.jpg)
ಉತ್ಸವಕ್ಕೆ ಚಾಲನೆ ನೀಡಲು ಬರುತ್ತಿದ್ದಂತೆ ರೈತರು ಸಚಿವರನ್ನು ಮುತ್ತಿಕೊಂಡರು. ಇದರಿಂದ ಅಧಿಕಾರಿಗಳು ಸಚಿವರ ಹತ್ತಿರ ಬರಲು ಪರದಾಡಬೇಕಾಯಿತು. ಸಚಿವರು ಈಚೆಗೆ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಂದಿದ್ದರು. ಈ ಬಗ್ಗೆ ಗೊತ್ತಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರು, ಅವರನ್ನು ಮುತ್ತಿಕೊಳ್ಳುವ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಮುರಿದರು.
ಧ್ವನಿವರ್ಧಕದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರೂ ಸಹ ಜನರು ಇದಕ್ಕೆ ಕ್ಯಾರೆ ಎನ್ನಲಿಲ್ಲ. ರೈತರು ಈ ವೇಳೆ ಸಚಿವರ ಬಳಿ ಗುಂಪು ಗುಂಪಾಗಿ ಆಗಮಿಸಿ ತಮ್ಮ ಸಮಸ್ಯೆ ಹೇಳಿಕೊಂಡರು.
ಎಲ್ಲ ಗದ್ದಲದ ಬಳಿಕ ಮಾತನಾಡಿದ ಸಚಿವರು, ಕೊರೊನಾದಿಂದ ಗುಣಮುಖರಾದ ಬಳಿಕ ಎಲ್ಲೆಡೆ ಓಡಾಡಲು ಶುರು ಮಾಡಿದ್ದೇನೆ. ಕತ್ತಲಗೆರೆಯಲ್ಲಿ ನನ್ನ ಅತ್ತೆ ಮೃತಪಟ್ಟಿದ್ದರಿಂದ ನಾನು ಕ್ವಾರಂಟೈನ್ನಲ್ಲಿದ್ದೆ. ಈಗ ಮತ್ತೆ ಕೆಲಸ ಶುರು ಮಾಡಿರುವೆ ಎಂದರು.