ದಾವಣಗೆರೆ/ಶಿವಮೊಗ್ಗ : ಸಚಿವ ಕೆ.ಎಸ್.ಈಶ್ವರಪ್ಪ ಏನೂ ಅಪರಾಧ ಮಾಡಿಲ್ಲ. ಯಾರೋ ಮಾಡಿದ ಅಪರಾಧಕ್ಕೆ ಅವರ ತಲೆದಂಡವಾಗಿದೆ. ತನಿಖೆ ಎದುರಿಸಿ ಈಶ್ವರಪ್ಪ ಆರೋಪ ಮುಕ್ತರಾಗಿ ಮರಳಿ ಮತ್ತೆ ಸಚಿವ ಸಂಪುಟ ಸೇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಶಾಸಕ ರೇಣುಕಾಚಾರ್ಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಶೇ.40ರಷ್ಟು ಕಮೀಷನ್ ಆರೋಪ ಸತ್ಯಕ್ಕೆ ದೂರ ಆಗಿದ್ದು, ಸತ್ಯಾಂಶ ಇಲ್ಲದ ಆರೋಪ ಇದು. ಎರಡ್ಮೂರು ತಿಂಗಳಲ್ಲಿ ತನಿಖೆ ಪೂರ್ಣ ಮಾಡಿದರೆ ಅವರ ಪಾತ್ರ ಇದರಲ್ಲಿ ಇಲ್ಲ ಎಂದು ಸಾಬೀತು ಆಗುತ್ತೆ.
ನಂತರ ಮತ್ತೊಮ್ಮೆ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲು ಯಾವುದೇ ಅಡ್ಡಿ, ಆತಂಕ ಇರುವುದಿಲ್ಲ. ಆದರೆ, ಇದನ್ನೇ ಕಾಂಗ್ರೆಸ್ ಪಕ್ಷದ ಮುಖಂಡರು ದೊಡ್ಡದಾಗಿ ಪ್ರಚಾರದ ಆಸ್ತಿ ಮಾಡಿಕೊಳ್ಳಬಾರದು ಎಂದರು. ಯಾರು ಯಾರ ಮೇಲಾದರೂ ಆರೋಪ ಮಾಡಬಹುದಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕೈವಾಡ ಇರುವುದು ಗೊತ್ತಿಲ್ಲ.
ಆದರೆ, ಇತಂಹ ಘಟನೆಗಳಿಗಾಗಿ ಕಾಂಗ್ರೆಸ್ನವರು ಕಾಯುತ್ತಿರುತ್ತಾರೆ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು, ಈ ಘಟನೆ ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಲಿದೆ. ಅದರ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ರಾಜ್ಯದಲ್ಲಿ ಪ್ರವಾಸ ಮಾಡಲು ಯಾವುದೇ ಅಪೇಕ್ಷೆ ಇಲ್ಲ. ಬಿ.ವೈ. ವಿಜಯೇಂದ್ರರವರಿಗೆ ಸಚಿವ ಸ್ಥಾನ ಕೊಡುವುದು ಕೇಂದ್ರಕ್ಕೆ ಬಿಟ್ಟ ವಿಚಾರ ಎಂದು ಬಿಎಸ್ವೈ ಹೇಳಿದರು.
ಇದನ್ನೂ ಓದಿ: 40 ಪರ್ಸೆಂಟ್ ಕಮಿಷನ್.. ಸರ್ಕಾರದ ಇನ್ನೂ 4 ವಿಕೆಟ್ ಪತನವಾಗಲಿದೆ : ಪ್ರಿಯಾಂಕ್ ಖರ್ಗೆ ಭವಿಷ್ಯ