ಹರಿಹರ: ರಾಜ್ಯದಲ್ಲಿಯೇ ಅತಿ ಹೆಚ್ಚು ವೀಳ್ಯದೆಲೆ ಬೆಳೆಯುವ ಸ್ಥಳ ಎಂದು ಪ್ರಸಿದ್ದವಾಗಿರುವ ಹರಿಹರ ತಾಲೂಕಿನಲ್ಲಿ ಸುಸಜ್ಜಿತವಾದ ವೀಳ್ಯದೆಲೆ ಮಾರುಕಟ್ಟೆಯಿಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ವೀಳ್ಯದೆಲೆ ಬೆಳೆಗೆ ಸೂಕ್ತ ಮಾರುಕಟ್ಟೆಯಿಲ್ಲದೇ ಸಂಕಷ್ಟಕ್ಕೀಡಾದ ಹರಿಹರ ತಾಲೂಕಿನ ರೈತರು ರಾಜ್ಯದಲ್ಲಿಯೇ ಅತೀ ಹೆಚ್ಚು ವೀಳ್ಯದೆಲೆ ಬೆಳೆಯನ್ನು ಬೆಳೆಯುತ್ತಿರುವುದು ಹರಿಹರ ತಾಲೂಕಿನ ಹನಗವಾಡಿ, ಬೆಳ್ಳೂಡಿ, ರಾಮತೀರ್ಥ, ನಾಗೇನಹಳ್ಳಿ, ರಾಯಪುರ, ಭಾನುವಳ್ಳಿ, ಶಿವನಹಳ್ಳಿ, ಬನ್ನಿಕೋಡು, ಬ್ಯಾಲದ ಹಳ್ಳಿ, ಎಕ್ಕೇಗುಂದಿ, ಸಾರಥಿ, ಚಿಕ್ಕಬಿದರಿ, ಹರಗನಹಳ್ಳಿ ಹಾಗೂ ದೊಗ್ಗಳ್ಳಿ ಗ್ರಾಮಗಳಲ್ಲಿ. ಆದರೆ ಸುಸಜ್ಜಿತವಾದ ವೀಳ್ಯದೆಲೆ ಮಾರುಕಟ್ಟೆಯಿಲ್ಲದೆ ರೈತರು ಬೈಪಾಸ್ ಸ್ಥಳಕ್ಕೆ ತಂದು ದಲ್ಲಾಳಿಗಳಿಗೆ ಮಾರುತ್ತಿದ್ದಾರೆ. ಬೇಡಿಕೆ ಇರುವ ಸಮಯದಲ್ಲಿ ಒಂದು ಬೆಂಡಿ ಎಲೆಗೆ ದಲ್ಲಾಳಿಗಳು ಎಂಟರಿಂದ ಹತ್ತು ಸಾವಿರ ರೂ. ಬೆಲೆ ಕಟ್ಟುತ್ತಾರೆ. ಬೇಡಿಕೆಯಿಲ್ಲದ ಸಮಯದಲ್ಲಿ ಒಂದರಿಂದ ಎರೆಡು ಸಾವಿರ ಬೆಲೆ ನಿಗದಿ ಮಾಡುತ್ತಾರೆ. ಇದರಿಂದ ರೈತರಿಗೆ ನಿರ್ದಿಷ್ಟ ಬೆಲೆ ಸಿಗುವುದಿಲ್ಲ. ಹಿಗಾಗಿ ರೈತರು ಮಾಡಿದ ಖರ್ಚಿಗಿಂತ ನಷ್ಟವೇ ಹೆಚ್ಚು ಉಂಟಾಗುತ್ತದೆ.
ಪ್ರಸ್ತುತ ದಿನಮಾನದಲ್ಲಿ ವೀಳ್ಯದೆಲೆ ಕಟಾವು ಮಾಡಲು ಮತ್ತು ಬಳ್ಳಿ ಕಟ್ಟಲು ಕೂಲಿಗಾರರು ಸಿಗುತ್ತಿಲ್ಲ. ದಿನದಿಂದ ದಿನಕ್ಕೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ದಲ್ಲಾಳಿಗಳನ್ನು ಬಿಟ್ಟು ಬೇರೆಡೆ ಮಾರಾಟ ಮಾಡಲು ಯಾವುದೇ ಮಾರ್ಗಗಳಿಲ್ಲ ಎಂದು ರೈತ ರುದ್ರಮುನಿ ಕೆ.ವಿ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತೋಟಗಾರಿಕಾ ಇಲಾಖೆಯ ಅಡಿಯಲ್ಲಿ ಈ ಬೆಳೆ ಬರುವುದರಿಂದ ಸರ್ಕಾರ ಕೂಡಲೇ ಗಮನ ಹರಿಸಿ ವೀಳ್ಯದೆಲೆ ಬೆಳೆಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.